Breaking News
   
   
   

ಸ್ಮಾರ್ಟ್ ಮೀಟರ್​ ಶುಲ್ಕಕ್ಕೆ ಹೈಕೋರ್ಟ್​ ತಡೆ ಬೆಸ್ಕಾಂಗೆ ಫುಲ್ ಕ್ಲಾಸ್​!

ದೇಶ

news-details

ಸ್ಮಾರ್ಟ್ ಮೀಟರ್​
ಶುಲ್ಕಕ್ಕೆ ಹೈಕೋರ್ಟ್​ ತಡೆ

 ಬೆಸ್ಕಾಂಗೆ ಫುಲ್ ಕ್ಲಾಸ್​!

ಬೆಸ್ಕಾಂನ ಸ್ಮಾರ್ಟ್​ ಮೀಟರ್​​   ಅಳವಡಿಕೆಗೆ ಆರಂಭಿಕ ವಿಘ್ನ ಎದುರಾಗಿದೆ. ವಿದ್ಯುತ್‌ ಬಳಕೆ ಸಂಬಂಧ ರಿಯಲ್ ಟೈಂನಲ್ಲಿ ವಿದ್ಯುತ್ ಬಳಕೆ ಬಗ್ಗೆ ನಿಖರ ಮಾಹಿತಿ ಒದಗಿಸುವ ಸ್ಮಾರ್ಟ್‌ ಮೀಟರ್‌ಗಳಿಗೆ ಭಾರಿ ಮೊತ್ತದ ಹೆಚ್ಚುವರಿ ದರ ನಿಗದಿ ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್‌  ಸ್ಮಾರ್ಟ್​ ಮೀಟರ್​​  ಶುಲ್ಕಕ್ಕೆ ತಡೆ ನೀಡಿದೆ. 2000 ರೂಪಾಯಿ ಇದ್ದ ಮೀಟರ್‌ಗೆ ಈಗ 8910 ರೂ. ಕೊಡಬೇಕಿದೆ ಎಂದು ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎನ್ನುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.‌ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಬಡವರಿಂದ ಇಷ್ಟು ಹಣ ಕಿತ್ತುಕೊಂಡರೆ ಎಲ್ಲಿಗೆ ಹೋಗಬೇಕು. ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೆ ಬಡವರೇನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಬೆಸ್ಕಾಂನ ಪ್ರೀಪೇಯ್ಡ್ ಮೀಟರ್ ಶುಲ್ಕ‌ಕ್ಕೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.

2000 ರೂಪಾಯಿ ಇದ್ದ ಮೀಟರ್‌ಗೆ ಈಗ 8910 ರೂ. ವಿಧಿಸಿರುವ ಬೆಸ್ಕಾಂ ಕ್ರಮ ಪ್ರಶ್ನಿಸಿ ಜಯಲಕ್ಷ್ಮೀ ಎನ್ನುವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಬೇರೆ ರಾಜ್ಯಗಳಲ್ಲಿ 900 ರೂಪಾಯಿಗೆ ಪ್ರೀಪೇಯ್ಡ್ ಮೀಟರ್ ನೀಡಲಾಗುತ್ತಿದೆ. ಕೆಇಆರ್‌ಸಿ ಸ್ಮಾರ್ಟ್ ಮೀಟರ್ ಕಡ್ಡಾಯವಲ್ಲವೆಂದಿತ್ತು. ಆದರೆ ಬೆಸ್ಕಾಂ ಸುತ್ತೋಲೆ ಸ್ಮಾರ್ಟ್ ಮೀಟರ್ ಕಡ್ಡಾಯ ಎಂದಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ದುಬಾರಿ ಪ್ರೀಪೇಯ್ಡ್ ವಿದ್ಯುತ್ ಮೀಟರ್‌ಗೆ ಅಸಮಾಧಾನ ವ್ಯಕ್ತಪಡಿಸಿದೆ. ನಿಮ್ಮಿಂದ ಯಾರು ಫ್ರೀ ವಿದ್ಯುತ್ ಕೇಳಿದ್ದರು? ಎಂದು ಪ್ರಶ್ನಿಸಿದ ಹೈಕೋರ್ಟ್‌, ಬಡವರಿಂದ ಇಷ್ಟು ಹಣ ಕಿತ್ತರೆ ಎಲ್ಲಿಗೆ ಹೋಗಬೇಕು? ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೆ ಬಡವರೇನು ಮಾಡಬೇಕು? ಎಂದು ತರಾಟೆಗೆ ತೆಗೆದುಕೊಂಡಿತು. ಕೊನೆಗೆ ಬೆಸ್ಕಾಂನ ಪ್ರೀಪೇಯ್ಡ್ ಮೀಟರ್ ಶುಲ್ಕ‌ಕ್ಕೆ ಮಧ್ಯಂತರ ತಡೆ ಆದೇಶ ಹೊರಡಿಸಿದೆ.

ಏನಿದು ಸ್ಮಾರ್ಟ್‌ ಮೀಟರ್‌?

ಸ್ಮಾರ್ಟ್‌ ವಿದ್ಯುತ್‌ ಮೀಟರ್‌ ಒಂದು ರೀತಿಯಲ್ಲಿ ಮೊದಲೇ ಪಾವತಿಸಿ ವಿದ್ಯುತ್‌ ಬಳಸುವ ವ್ಯವಸ್ಥೆ. ಈ ನೂತನ ವ್ಯವಸ್ಥೆಯಲ್ಲಿ ಮೊಬೈಲ್‌ ಫೋನ್‌ಗಳ ಮಾದರಿಯಲ್ಲೇ ವಿದ್ಯುತ್‌ ಬಳಕೆಗೂ ಪ್ರೀಪೇಯ್ಡ್‌ ರೀಚಾರ್ಜ್‌ ಕಾರ್ಡ್‌ ಪರಿಚಯಿಸಲಾಗುತ್ತಿದೆ. ಗ್ರಾಹಕರು, ಪ್ರೀಪೇಯ್ಡ್‌ ಮೊಬೈಲ್‌ ಸಿಮ್‌ ಮಾದರಿಯಲ್ಲಿ ಮೊದಲೇ ಹಣ ಕಟ್ಟಿ ವಿದ್ಯುತ್‌ ಸಂಪರ್ಕ ಪಡೆಯಬೇಕಾಗುತ್ತದೆ. ಪ್ರೀಪೇಯ್ಡ್‌ ಸಿಮ್‌ ಕಾರ್ಡ್‌ಗಳ ರೀತಿಯಲ್ಲೇ ಪ್ರೀಪೇಯ್ಡ್‌ ಸ್ಮಾರ್ಟ್‌ ಮೀಟರ್‌ಗಳೂ ಕಾರ್ಯ ನಿರ್ವಹಿಸುತ್ತವೆ.

ಪ್ರೀಪೇಯ್ಡ್‌ ಸಿಮ್‌ ಕಾರ್ಡ್‌ಗಳನ್ನು ರೀಚಾರ್ಜ್‌ ಮಾಡಿಸಿ ತಮಗೆ ಬೇಕಾದಷ್ಟು ಟಾಕ್‌ ಟೈಮ್‌ ಹಾಗೂ ಇಂಟರ್‌ನೆಟ್‌ ಡೇಟಾ ಪಡೆಯಬಹುದು. ಹಾಗೆಯೇ, ಗ್ರಾಹಕರು ಪ್ರೀಪೇಯ್ಡ್‌ ವಿದ್ಯುತ್‌ ಮೀಟರ್‌ಗಳನ್ನು ಆನ್‌ಲೈನ್‌ ಮೂಲಕ ಅಥವಾ ಸಮೀಪದ ವಿದ್ಯುತ್‌ ವಿತರಣಾ ಕಚೇರಿಗಳಲ್ಲಿ ರೀಚಾರ್ಜ್‌ ಮಾಡಿಸಿ ತಮಗೆ ಬೇಕಾದಷ್ಟು ಯೂನಿಟ್‌ಗಳನ್ನು ಪಡೆಯಬಹುದು.

ಸ್ಮಾರ್ಟ್ ಮೀಟರ್ ದರ ಎಷ್ಟು ಗೊತ್ತಾ?

ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ  ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ‌್ ಸಿಬ್ಬಂದಿಯ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್​ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಿದೆ. ಇದರ ಮಧ್ಯೆ ಸ್ಮಾರ್ಟ್ ಮೀಟರ್ ಗಳ ಅಳವಡಿಕೆ ಕಡ್ಡಾಯಗೊಳಿಸಿ ಬೆಸ್ಕಾಂ ಆದೇಶ ಹೊರಡಿಸಿದೆ. ಆದ್ರೆ, ಸದ್ಯ ಚಾಲ್ತಿಯಲ್ಲಿರುವ ಸ್ಟಾಟಿಕ್ ಮೀಟರ್​ಗಳಿಗೂ ಹೊಸ ಸ್ಮಾರ್ಟ್​ ಮೀಟರ್​ಗಳ ದರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸ್ಮಾರ್ಟ್​ ಮೀಟರ್ ದರ ಶೇ.400ರಿಂದ 800ರಷ್ಟು ಏರಿಕೆಯಾಗಿದ್ದು, ಹೊಸ ಸಂಪರ್ಕಕ್ಕೆ ಸ್ಮಾರ್ಟ್​ ಮೀಟರ್​ ಕಡ್ಡಾಯವಾಗಿದೆ.

ಎಲ್ ಟಿ ಸಿಂಗಲ್ ಫೇಸ್ 2 ಸ್ಟಾಟಿಕ್​​ ಮೀಟರ್​​​ ದರ 980 ರೂಪಾಯಿ ಇದ್ದು, ಸ್ಮಾರ್ಟ್​​ ಮೀಟರ್​​ ದರ 4,800 ರೂ. ಇದೆ. ಎಲ್ ಟಿ 3 ಫೇಸ್ 4 ಸ್ಟಾಟಿಕ್​​ ಮೀಟರ್ 2,430 ರೂಪಾಯಿ ಇದ್ರೆ, ಸ್ಮಾರ್ಟ್​​ ಮೀಟರ್​​ ದರ 8,500 ರೂ. ಆಗಿದೆ. ಇನ್ನು ಎಲ್ ಟಿ 3 ಫೇಸ್ CT ಆಪರೇಟೆಡ್ 3450 ರಿಂದ 10,900 ರೂಪಾಯಿ ಆಗಿದೆ. ಇದರಿಂದ ಬಡವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದ್ದು, ಇದೀಗ ಮಹಿಳೆಯೋಬ್ಬರು ಕೋರ್ಟ್ ಮೆಟ್ಟಿಲೇರಿ ಈಗ ಸ್ಮಾರ್ಟ್​ ಮೀಟರ್​ ಓಟಕ್ಕೆ ಬ್ರೇಕ್ ಹಾಕಿಸಿದ್ದಾರೆ.

news-details