ಮಡಿಕೇರಿ-ಮಂಗಳೂರು ರಾಷ್ಟಿçÃಯ ಹೆದ್ದಾರಿ ೨೭೫ರ ಜೋಡುಪಾಲದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಮಡಿಕೇರಿಯಿಂದ ಮಂಗಳೂರಿಗೆ ಗಾಜನ್ನು ಸಾಗಿಸುತ್ತಿದ್ದ ಲಾರಿಯೊಂದು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡು ಜೋಡುಪಾಲದ ಸೇತುವೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಬರುತ್ತಿದ್ದ ಕಾರಿನ ಹಿಂಭಾಗಕ್ಕೆ ಲಾರಿಯ ಹಿಂಭಾಗ ಡಿಕ್ಕಿ ಹೊಡೆದು ಗಾಜುಗಳು ಕಾರಿನ ಮೇಲೆ ಬಿದ್ದಿವೆ. ಈ ವೇಳೆ ಲಾರಿಯ ಹಿಂಬದಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಾಜಿನ ಅಡಿಯಲ್ಲಿ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕರನ್ನು ಖಾಸಗಿ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ. ಜೋಡುಪಾಲ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಕೆಟ್ಟುನಿಂತಿದ್ದು, ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅಪಘಾತ ಪ್ರಕರಣ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೈವೆಯಲ್ಲಿ ಅಪಘಾತವಾದ ಕಾರಣ ನೂರಾರು ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕಾಗಮಿಸಿದ ಪೊಲೀಸರು, ಮಹಜರು ನಡೆಸಿದ ಬಳಿಕ ಬಸ್ ಅನ್ನು ಹೊರತೆಗೆದು ಇತರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು