Breaking News
   
   
   

1998 ಕೋಡೀರ ಕಪ್

ಕ್ರೀಡೆ

news-details

1998 ಕೋಡೀರ ಕಪ್

       1997ರಲ್ಲಿ ಪಾಂಡಂಡ ಕುಟ್ಟಪ್ಪನವರು ಪ್ರಥಮ ಬಾರಿಗೆ ಆರಂಭಿಸಿದ ಕೌಟುಂಬಿಕ ಹಾಕಿ ಹಬ್ಬವು ಮುಗಿದ ನಂತರ, ಮುಂದಿನ ವರ್ಷ ಯಾರಾದರೂ ಇದನ್ನು ನಡೆಸಬೇಕು ಎಂಬ ಕೋರಿಕೆ ಇಟ್ಟಾಗ, ಕೋಡೀರ ಕುಟುಂಬದವರ ಮುಂದೆ ಬಂದು ಕಡಂಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಡೆಸಿದರು. ಯಾವುದೇ ಪ್ರಾಯೋಜಕತ್ವವಿಲ್ಲದೆ ಕುಟುಂಬದ ಸ್ವಂತ ಹಣದಲ್ಲಿ ಅಚ್ಚುಕಟ್ಟಾಗಿ ನಡೆಸಿದರು. 
 ಮಹಿಳೆಯರ ಹಾಕಿ ಪಂದ್ಯಾವಳಿ
       ಕೋಡೀರ ಕುಟುಂಬದವರು ಪುರುಷರ ಹಾಕಿ ಪಂದ್ಯಾವಳಿ ಜೊತೆಯಲ್ಲೇ ಮಹಿಳೆಯರಿಗೂ ಕೂಡ ಪ್ರಪ್ರಥಮವಾಗಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದರು, ಇದಲ್ಲದೆ ಟೆಕ್ನಿಕಲ್ ಟೇಬಲ್ ಅನ್ನು ಕೂಡ ಪರಿಚಯಿಸಿದರು. ಅಂದು ಈ ಪಂದ್ಯಾವಳಿಯಲ್ಲಿ ಪಟ್ಟಡ, ಕೋಡೀರ, ಕಡೆಮಾಡ ಹಾಗು ಮೆಕೇರೀರ ಕುಟುಂಬಗಳು ಭಾಗವಹಿಸಿದ್ದವು. ಫೈನಲ್ ಪಂದ್ಯಾವಳಿಯು ಕಡೆಮಾಡ ಹಾಗು ಪಟ್ಟಡ ನಡುವೆ ನಡೆಯಿತು. ಇದರಲ್ಲಿ ಪಟ್ಟಡ ಕುಟುಂಬದವರು ವಿಜೇತರಾದರು. 
     ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೂರ್ಗ್ ಹಾಕಿ ಅಸೋಸಿಯೇಷನ್ ನ ಅಧ್ಯಕ್ಷರಾದ ಸ್ವಾತಿ ಬೋಪಣ್ಣ ನವರು ಅಂದು ಬಹುಮಾನ ವಿತರಿಸಿದರು. 
      ಕೌಟುಂಬಿಕ ಹಾಕಿಯಲ್ಲಿ ಮಹಿಳೆಯರು ಆಡಿದ ಪ್ರಥಮ  ಕಪ್ ಕೋಡೀರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 
      ಅಂದಿನ ತೀರ್ಪುಗಾರರಾಗಿ ಪುಚ್ಚಿಮಾಡ ಹರೀಶ್ ದೇವಯ್ಯ, ಪಳಂಗಂಡ ಅಪ್ಪಣ್ಣ, ಮಾದೆಯಂಡ ಸಂಪಿ, ನೆರವಂಡ ಭರತ್, ಕೇಚಂಡ ಪ್ರಸನ್ನ, ಕನ್ನಂಬೀರ ಚಿನ್ನಪ್ಪ, ಮಾಳೆಟೀರ ಶ್ರೀನಿವಾಸ್, ಅಜ್ಜೆಟೀರ ಬೋಪಣ್ಣ, ಕೋಡೀರ ಪ್ರಕಾಶ್ ಹಾಗು ಪ್ರಸನ್ನ ಹಾಗೂ ಮೈದಾನ ಉಸ್ತುವಾರಿಯನ್ನು ತಾತಂಡ ಪ್ರತಾಪ್ ಹಾಗೂ ವೀಕ್ಷಕ ವಿವರಣೆಯನ್ನು ದ್ವಿಭಾಷಾ ಪರಿಣಿತ ಮನೆಯಪಂಡ ಹರೀಶ್ ನಾಚಪ್ಪ, ಮುಲ್ಲೇರ ಜಿಮ್ಮಿ ಹಾಗೂ ಮಂಡೆಟೀರ ಸುರೇಶ್ ಅದ್ಭುತವಾಗಿ ನಿರ್ವಹಿಸಿದರು.
ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. 
     ಇದೆಲ್ಲವನ್ನು ಅಂದು ಹಾಕಿಯ ಉಳಿವಿಗಾಗಿ ಪಣತೊಟ್ಟು ಶ್ರಮಿಸಿದ ಎಲ್ಲರೂ ಯಾವುದೇ ಸಂಭಾವನೆಯನ್ನು ಪಡೆಯದೆ ಉಚಿತವಾಗಿ ನಡೆಸಿಕೊಟ್ಟು  ಯಶಸ್ಸನ್ನು ಕಂಡರು. ಇದನ್ನು ಇಂದಿಗೂ ಕೌಟುಂಬಿಕ ಹಾಕಿ ಹಬ್ಬಗಳಲ್ಲಿ ಜ್ಞಾಪಿಸಿಕೊಳ್ಳಬೇಕು ಹಾಗೂ ಕೋಡೀರ ಕುಟುಂಬಕ್ಕೆ ಧನ್ಯವಾದವನ್ನು ಅರ್ಪಿಸಬೇಕು. 
     ಇದಲ್ಲದೆ ಪಾಂಡಂಡ ಕುಟ್ಟಪ್ಪ ಹಾಕಿ ಅಕಾಡೆಮಿಯನ್ನು ಸ್ಥಾಪಿಸಬೇಕು ಹಾಗೂ ಪ್ರತಿ ವರ್ಷ ಒಂದೊಂದು ಕುಟುಂಬವೂ ಈ ಕೌಟುಂಬಿಕ ಹಾಕಿ ಹಬ್ಬವನ್ನು ನಡೆಸುವ ತೀರ್ಮಾನವನ್ನು ತೆಗೆದುಕೊಂಡು, 25 ವರ್ಷಗಳಿಂದ ಕೌಟುಂಬಿಕ ಹಾಕಿ ಹಬ್ಬವು ನಡೆಯುತ್ತಲೇ ಬರುತ್ತಿದೆ.
 ಮುದ್ದಂಡ ಹಾಕಿ ಹಬ್ಬದಲ್ಲಿ ಮಹಿಳೆಯರ ಪಂದ್ಯಾಟ
        1998ರಲ್ಲಿ ಕೋಡೀರ ಕಪ್ ನಲ್ಲಿ ಮಹಿಳೆಯರ ಹಾಕಿ ಪಂದ್ಯಾಟ ಮುಗಿದ 25 ವರ್ಷಗಳ ನಂತರ ಇಂದು ಮುದ್ದಂಡ ಕುಟುಂಬದವರು ಮಹಿಳೆಯರಿಗಾಗಿ 5 - ಎ ಸೈಡ್ ಹಾಕಿ ಪಂದ್ಯಾವಳಿಯನ್ನು ಕೊಡವ ಹಾಕಿ ಅಕಾಡೆಮಿ ಅಧೀನದಲ್ಲಿ ಆಯೋಜಿಸಿದ್ದು, 56 ತಂಡಗಳು ಭಾಗವಹಿಸುತ್ತಿವೆ.  ಕೌಟುಂಬಿಕ ಹಾಕಿ ಹಬ್ಬದ ನಿಯಮದಂತೆ ಮಹಿಳೆಯರು ತಮ್ಮ ಗಂಡನ ಮನೆ(ಬಾಕೆಮನೆ)ಇಲ್ಲವೇ ತವರು ಮನೆಗೆ(ತಾಮನೆ) ಆಡಬಹುದು.  
 ಭಾರತದ ಮಹಿಳಾ ಹಾಕಿ ಆಟಗಾರರು
       ಕೊಡಗಿನಿಂದ ಹಲವಾರು ಮಹಿಳಾ ಹಾಕಿ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ ಅವರಲ್ಲಿ ಅಮ್ಮಾಟಂಡ ಪುಷ್ಪ ಪೂವಯ್ಯ, ಪಟ್ಟಮಾಡ ಜಮುನಾ, ಶಿವಚಾಳಿಯಂಡ ನಿಲನ್, ಮಲ್ಲಮಾಡ ಲೀಲಾವತಿ ಹಾಗೂ ಪೊನ್ನಮ್ಮ.  ಅಂತರಾಷ್ಟ್ರೀಯ ಹಾಕಿ ತೀರ್ಪುಗಾರ್ತಿಯರಲ್ಲಿ ಪುಚ್ಚಿಮಂಡ ಅನುಪಮ ಹಾಗು ಪುಳ್ಳಂಗಡ ರೋಹಿಣಿ. ಇದಲ್ಲದೆ ಕೊಡಗಿನಿಂದ 17 ವೀರ ವನಿತೆಯರು ಭಾರತದ ಆಯ್ಕೆ ಶಿಬಿರದಲ್ಲಿ ಭಾಗವಹಿಸಿದ್ದಾರೆ ಎಂಬುದು ಹೆಮ್ಮೆಯ ವಿಷಯ. 
ಈ ಬಾರಿ ಮಹಿಳೆಯರ ಹಾಕಿ ಪಂದ್ಯಾವಳಿಯು ಮುದ್ದಂಡ ಹಾಕಿ ಹಬ್ಬಕ್ಕೆ ಹೆಚ್ಚಿನ ಮೆರುಗು ನೀಡಿದೆ.  ಭಾರತದ ಸಂವಿಧಾನದಲ್ಲಿ ಮಹಿಳೆಯರಿಗೆ 33% ಮೀಸಲಾತಿ ಇರುವುದರಿಂದ ಇಂದಿನ ಕೌಟುಂಬಿಕ ಹಾಕಿ ಹಬ್ಬದಲ್ಲಿ ಮಹಿಳೆಯರಿಗೆ  ಹೆಚ್ಚಿನ ಪ್ರಾತಿನಿಧ್ಯ ಕೊಟ್ಟು ಕೌಟಂಬಿಕ ಹಾಕಿಗೆ ಮೆರುಗು ತಂದಿದ್ದು ಎಲ್ಲಾ ಕ್ರೀಡಾಪಟುಗಳಿಗೆ ಹರ್ಷ ತಂದಿದೆ. ಈ ಪಂದ್ಯಾವಳಿಯನ್ನು ಅಯೋಜಿಸಿದ್ದಕ್ಕೆ ಮುದ್ದಂಡ ಕುಟುಂಬಕ್ಕೆ ಕ್ರೀಡಾಭಿಮಾನಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮುಂದಿನ ವರ್ಷವೂ ಇದೇ ರೀತಿ ಮಹಿಳಾ ಹಾಕಿ ಪಂದ್ಯಾವಳಿ ನಡೆಯಲಿ ಎಂಬುದು ಕ್ರೀಡಾಪ್ರಿಯರ ಬಯಕೆ. 
 
 ಕೊಡವಾಮೆ ಬಾಳೊ 

news-details