Breaking News
   
   
   

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ ವೈರಸ್‌ - ಕಾಡಿಗೆ ಹೋಗುವವರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ರಾಜ್ಯ

news-details

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ ವೈರಸ್‌ -
ಕಾಡಿಗೆ ಹೋಗುವವರಿಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ

ಶಿವಮೊಗ್ಗ : ದಶಕಗಳಿಂದ ಕಾಡುತ್ತಿರುವ ಮಂಗನಕಾಯಿಲೆ ಮಲೆನಾಡಿನಲ್ಲಿ ಮತ್ತೆ ಕಾಣಿಸಿರುವುದು ಆತಂಕವುಂಟು ಮಾಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜಗ್ಗಿನಗದ್ದೆ ಬಳಿ ಉಣುಗುಗಳಲ್ಲಿ ಕೆಎಫ್‌ಡಿ ವೈರಸ್ ಕಾಣಿಸಿಕೊಂಡಿದೆ. ಸದ್ಯ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಕಳೆದ ಬಾರಿ ಜನರನ್ನು ಕಾಡಿ ಅನೇಕ ಸಾವುನೋವುಗಳಿಗೆ ಕಾರಣವಾಗಿದ್ದ ಕೆಎಫ್‌ಡಿ (ಕ್ಯಾಸನೂರು ಅರಣ್ಯ ಕಾಯಿಲೆ) ವೈರಸ್ ಈ ಬಾರಿ ಮತ್ತೆ ಬಂದಿದೆ.
ಬೆಟ್ಟಬಸವಾನಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಉಣುಗುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ವೈರಸ್ ಇರುವುದು ದೃಢಪಟ್ಟಿದೆ. ಈಗ ಎಲ್ಲಿ ನೋಡಿದರೂ ಅಡಕೆ ಕೊಯ್ಲು, ತೋಟಕ್ಕೆ ಗೊಬ್ಬರ ಹಾಕುವುದು, ಶುಂಠಿ ಬೆಳೆಯುವವರು ಕಾಡಿನಲ್ಲಿ ತರಗು (ಒಣಗಿದ ಎಲೆ) ಸಂಗ್ರಹಿಸುವುದು ನಡೆಯುತ್ತಿದೆ. ಕಳೆದ ಬಾರಿ ಕೆಎಫ್‌ಡಿ ಪಾಸಿಟಿವ್ ಬಂದಿದ್ದ ಬಹಳಷ್ಟು ಮಂದಿ ತೋಟಗಳಿಗೆ ಕೆಲಸಕ್ಕೆ ಹೋದವರಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಡಿಗೆ ಹೋಗುವವರಿಗೆ ಮುನ್ನೆಚ್ಚರಿಕೆ ವಹಸಿಲು ಸೂಚಿಸಲಾಗಿದೆ.
ಅಡಕೆ ತೋಟದ ಕೆಲಸಕ್ಕಾಗಿ ಶಿವಮೊಗ್ಗ ಅಷ್ಟೇ ಅಲ್ಲದೇ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಭಾಗದ ಕೂಲಿ ಕಾರ್ಮಿಕರು ಸಹ ಆಗಮಿಸುತ್ತಿದ್ದು ಅವರಿಗೆ ಇಲ್ಲಿನ ಉಣುಗು, ಕೆಎಫ್‌ಡಿ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆರೋಗ್ಯ ಇಲಾಖೆ ಈ ಎಲ್ಲ ಕೂಲಿ ಕಾರ್ಮಿಕರಿಗೆ ಡೆಫಾ ಆಯಿಲ್ ಕೊಡುವುದು, ಉಣುಗುಗಳಿಂದ ರಕ್ಷಣೆ ಪಡೆಯುವುದು ಹೇಗೆ ಎಂಬುದನ್ನು ತಿಳಿಸಬೇಕಿದೆ. ಅಡಕೆ ತೋಟದ ಮಾಲೀಕರು, ಮೇಸ್ತ್ರಿಗಳು ಕೂಲಿ ಕಾರ್ಮಿಕರಿಗೆ ತಿಳಿವಳಿಕೆ ಹೇಳಬೇಕಿದೆ.
ಬೆಟ್ಟಬಸವಾನಿ, ತೀರ್ಥಹಳ್ಳಿ ತಾಲೂಕಿನ ಕನ್ನಂಗಿ, ಗುತ್ತಿಎಡೆಹಳ್ಳಿ, ಮಾಳೂರು, ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಮಂಗನಕಾಯಿಲೆಯ ಹಾಟ್‌ಸ್ಪಾಟ್‌ ಎಂದು ಗುರುತಿಸಲ್ಪಟ್ಟಿದೆ. ಈ ವ್ಯಾಪ್ತಿಯ ಗ್ರಾಮಗಳ ಜನರು ಕಾಡಿಗೆ ಹೋಗಿ ಬಂದ ಬಳಿಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಿದೆ.

news-details