Breaking News
   
   
   

ಅಂತರಾಷ್ಟ್ರೀಯ ಹಾಕಿ ತೀರ್ಪುಗಾರ ಎ ಬಿ ಪಳಂಗಪ್ಪ

ಕ್ರೀಡೆ

news-details

ಅಂತರಾಷ್ಟ್ರೀಯ ಹಾಕಿ ತೀರ್ಪುಗಾರ ಎ ಬಿ ಪಳಂಗಪ್ಪ

      ಕೊಡಗಿನ ಹಾಕಿಯ ಚರಿತ್ರೆಯಲ್ಲಿ ಬಹಳಷ್ಟು ಆಟಗಾರರು ರಾಜ್ಯ ಹಾಗೂ ಭಾರತವನ್ನು ಪ್ರತಿನಿಧಿಸಿದ್ದಾರೆ, ಹಾಗೆಯೇ ತೀರ್ಪುಗಾರಿಕೆಯಲ್ಲಿ ಬಹಳಷ್ಟು ಕ್ರೀಡಾಪಟುಗಳು ಹೆಸರು ಮಾಡಿದ್ದಾರೆ. ಅವರಲ್ಲಿ ರೋಚಕವಾದ ಹಾಕಿಯ ತೀರ್ಪುಗಾರನೇ ಎ ಬಿ ಪಳಂಗಪ್ಪ. 
       ಅಚ್ಚಕಾಳೇರ ಬಿದ್ದಪ್ಪ ಮತ್ತು ಗಂಗಮ್ಮ(ತಾಮನೆ ಚೇನಂಡ) ದಂಪತಿಯರ ಪುತ್ರನಾಗಿ ಪಳಂಗಪ್ಪನವರು 1953 ರಂದು ಕಟ್ಟಿಮಾಡಿನಲ್ಲಿ ಜನಿಸಿದರು. 
 ಶಿಕ್ಷಣ
     ಪ್ರಥಮಕ್ಕೆ ಶಿಕ್ಷಣವನ್ನು ಮರಗೋಡು ಪ್ರೌಢಶಿಕ್ಷಣವನ್ನು ಮೂರ್ನಾಡು ಹಾಗೂ 4 ವರ್ಷ ಕೈಗಾರಿಕಾ ತರಬೇತಿ ಪಡೆದರು. ಬಾಲ್ಯದಲ್ಲಿ ಇವರು ಶಾಲಾ ಮಟ್ಟದಲ್ಲೂ ಹಾಕಿ ಆಡುತ್ತಲಿದ್ದರು. 
 BEML ಗೆ ಸೇರ್ಪಡೆ 
      1972ರಲ್ಲಿ BEML, ಬೆಂಗಳೂರಿಗೆ ಸೇರಿದರು. 1973 ರಲ್ಲಿ BEML ಹಾಕಿ ತಂಡಕ್ಕೆ ಗೋಲ್ ಕೀಪರ್ ಆಗಿ ಆಡಲಾರಂಭಿಸಿದರು. ಎರಡು ಬಾರಿ ಕೋವಿಲ್ ಪಟ್ಟಿಯ ಆಲ್ ಇಂಡಿಯಾ ಟೂರ್ನಮೆಂಟ್ ನ ಚಾಂಪಿಯನ್ಸ್ ಆದರು. 1982 ರಲ್ಲಿ ಕರ್ನಾಟಕ ರಾಜ್ಯ ಹಾಕಿ ತಂಡದ ಪರವಾಗಿ ಗ್ವಾಲಿಯರ್ ನಲ್ಲಿ ಆಡಿದರು. ಬೆಂಗಳೂರು ಜಿಲ್ಲಾ ಹಾಕಿ ತಂಡದ ಕ್ಯಾಪ್ಟನ್ ಆಗಿದ್ದರು. 40 ವರ್ಷಗಳ ಕಾಲ BEML ತಂಡಕ್ಕೆ ಆಡಿದರು. ಕೊಡಗಿನಲ್ಲಿ ಬಿ.ಬಿ.ಸಿ ಪರ ಪಂದ್ಯಾವಳಿ ಆಡಿದರು. 
 ಅಂಪೈರ್ ವೃತ್ತಿ
        ಅಂಪೈರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, 1985ರಲ್ಲಿ ಅಂಪರ್ ವೃತ್ತಿಯಲ್ಲಿ ತೊಡಗಿದರು. 1988ರಲ್ಲಿ ಪ್ರಥಮ ಬಾರಿಗೆ ಪುನನ್ಯಾಷನಲ್ ರಾಷ್ಟ್ರಮಟ್ಟದಲ್ಲಿಅಂಪಿರಿಂಗ್ ವೃತ್ತಿ ಪ್ರಾರಂಭವಾಯಿತು. ತದನಂತರ ಗ್ವಾಲಿಯರ್, ಜಮ್ಮು, ಬೆಂಗಳೂರು ನ್ಯಾಷನಲ್ಸ್ ಹಾಗೂ 100ಕ್ಕೂ ಹೆಚ್ಚು ಆಲ್ ಇಂಡಿಯಾ ಟೂರ್ನಮೆಂಟ್ ಗಳಲ್ಲಿ ಅಂಪೈರಿಂಗ್ ಮಾಡಿದರು.
 ಕರ್ನಾಟಕದ ಹಾಕಿ ತೀರ್ಪುಗಾರ 
        ಕರ್ನಾಟಕದಿಂದ ಪಳಂಗಪ್ಪನವರು ಒಂದು ಜೂನಿಯರ್ ನ್ಯಾಷನಲ್ಸ್, ಎರಡು ಸೀನಿಯರ್ ನ್ಯಾಷನಲ್ಸ್ ಹಾಗೂ ನ್ಯಾಷನಲ್ ಗೇಮ್ಸ್ ನ ಫೈನಲ್ ನಲ್ಲಿ ತೀರ್ಪುಗಾರರಿಗೆ ನೀಡಿದ ಕರ್ನಾಟಕದ ಏಕೈಕ ಹಾಕಿ ತೀರ್ಪುಗಾರ. 
 ಅಂತರಾಷ್ಟ್ರೀಯ ಹಾಕಿ ಅಂಪೈರಿಂಗ್ 
           ಲಂಡನ್ ಹಾಗೂ ಸಿಂಗಾಪುರದ ಟೆಸ್ಟ್ ಸೀರೀಸ್, ಜರ್ಮನಿಯ 4 ನೇಷನ್ ಟೂರ್ನಮೆಂಟ್, ಅಟ್ಲಾಂಟದ  ಪ್ರಿ ಒಲಂಪಿಕ್ಸ್ ಹಾಗು  ಆಸ್ಟ್ರೇಲಿಯಾದ ಎರಡು ಪಂದ್ಯಾವಳಿಗಳು ಹೀಗೆ ಒಟ್ಟು 36 ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. 
ಸುರ್ಜಿತ್ ಸಿಂಗ್ ಮೆಮೋರಿಯಲ್ 
       ವಿಶ್ವ ಕಂಡ ಅದ್ಭುತ ಹಾಕಿ ಆಟಗಾರ ಕೆಂಪು ಕಣ್ಣಿನ ಸರದಾರ ಸರ್ಜಿತ್ ಸಿಂಗ್. ಅವರು ವಾಹನ ಅಪಘಾತದಲ್ಲಿ ಮರಣ ಪಟ್ಟರು. ಅವರ ಜ್ಞಾಪಕಾರ್ಥವಾಗಿ ಇಂದು ಕೂಡ ಪಂಜಾಬ್ ನಲ್ಲಿ ಸುರ್ಜಿತ್ ಸಿಂಗ್ ಮೆಮೋರಿಯಲ್ ಪಂದ್ಯಾವಳಿ ನಡೆಯುತ್ತದೆ. ಈ ಅದ್ಭುತ ಪಂದ್ಯಾವಳಿಗೆ ಬಹಳಷ್ಟು ಜನ ಕಿಕ್ಕಿರಿದು ಬರುತ್ತಾರೆ. ಭಾರತದ ಬಲಿಷ್ಠ ತಂಡಗಳು ಇಲ್ಲಿ ಭಾಗವಹಿಸುತ್ತವೆ. ಇದರ ತೀರ್ಪುಗಾರಿಕೆಯನ್ನು ಪಳಂಗಪ್ಪನವರು ಹಾಗೂ ಅಂತರಾಷ್ಟ್ರೀಯ ತೀರ್ಪುಗಾರ ಎ.ಎಸ್.ಬಾವ ಅವರು ನಿಭಾಯಿಸುತ್ತಾರೆ. ಇಲ್ಲಿ ಅಚ್ಚುಕಟ್ಟಿನ ತೀರ್ಪುಗಾರಿಕೆ ನೀಡಿದ್ದ ಪಳಂಗಪ್ಪನವರಿಗೆ ಪ್ರೇಕ್ಷಕರು ಶಹಭಾಶ್ ಕೂಡ ಹೇಳಿದ್ದುಂಟು. 
 ಇಂದಿರಾಗಾಂಧಿ ಗೋಲ್ಡ್ ಕಪ್ 
        ಅಂತರಾಷ್ಟ್ರೀಯ ಇಂದಿರಾಗಾಂಧಿ ಗೋಲ್ಡ್ ಕಪ್  ಫೈನಲ್ ಪಂದ್ಯಾವಳಿಯನ್ನು ಇಂಗ್ಲೆಂಡಿನ ಡಗ್ಲಾಸ್ ಬ್ರೂಸ್ ಹಾಗೂ ಪಳಂಗಪ್ಪನವರು ತೀರ್ಪುಗಾರರಿಗೆ ಮಾಡಿದರು. 
      ಪಳಂಗಪ್ಪನವರು ಅಂತರಾಷ್ಟ್ರೀಯ ತೀರ್ಪುಗಾರ ಮೊಹಮ್ಮದ್ ಗೂಸ್ ಅವರ ಅಡಿಯಲ್ಲಿ ತೀರ್ಪುಗಾರಿಕೆ ನಿಭಾಯಿಸಿದರು. ಅಂತರಾಷ್ಟ್ರೀಯ ತೀರ್ಪುಗಾರರಾದ ಸತೀಂದರ್  ವಾಲಿಯ, ಟಿ.ಎಸ್.ಬುಲ್ಲರ್, ಕೆ.ಕೃಷ್ಣಮೂರ್ತಿ ಹಾಗು ಪೀಟರ್ ಮನುಜಸ್ ಅವರಿಗೆ ಸರಿಸಮಾನವಾಗಿ ತೀರ್ಪುಗಾರಿಕೆ ನೀಡಿದ ಕೊಡಗಿನ ಹೆಮ್ಮೆಯ ತೀರ್ಪುಗಾರ ಪಳಂಗಪ್ಪ. 
 ಕೂಪರ್ ಟೆಸ್ಟ್ 
       1996ರ ಅಟ್ಲಾಂಟ ಒಲಂಪಿಕ್ಸ್ ನಲ್ಲಿ ಉತ್ತೀರ್ಣರಾಗಲು 12 ನಿಮಿಷದಲ್ಲಿ 3 ಕಿ.ಮೀ ಓಡಬೇಕು, 60 ಮೀಟರ್ 9 ಸೆಕೆಂಡುಗಳಲ್ಲಿ ಮುಗಿಸಬೇಕು ಹೀಗೆ ನಾಲ್ಕು ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಇದರಲ್ಲಿ ಉತ್ತೀರ್ಣರಾದ ಪ್ರಥಮ ಕೊಡವ ಎಂಬ ಹೆಗ್ಗಳಿಕೆ ಇವರದು. 
  ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪಂದ್ಯಾವಳಿ 
       ಮಡಿಕೇರಿಯಲ್ಲಿ ಫೀಲ್ಡ್ ಮಾರ್ಷಲ್ ಆಹ್ವಾನಿತ ಪಂದ್ಯಾವಳಿ ನಡೆಯಿತು. ಅದ್ಭುತ ತಂಡ ಮಹೀಂದ್ರ ಹಾಗು ASC ನಡುವೆ ನಡೆಯಿತು. ಒಲಂಪಿಯನ್ ಜೋಕಿಮ್ ಕರ್ವಾಲೋ ಹಾಗೂ ಸೋಮಯ್ಯ ಅವರು ಮಹೀಂದ್ರ ತಂಡದ ಪರ ಆಡಿದರು. ಪಂದ್ಯಾವಳಿ ಬಹಳ ರೋಚಕವಾಗಿತ್ತು. ಇದರ ತೀರ್ಪುಗಾರಿಕೆ ಪಳಂಗಪ್ಪ ಹಾಗೂ ದಿವಂಗತ ಐಚಂಡ ಕುಶಾಲಪ್ಪ ನಿಭಾಯಿಸಿದರು. ಪಂದ್ಯಾಟದ ಮಧ್ಯದಲ್ಲಿ ಕರ್ವಾಲೋ ರಫ್ ಟ್ಯಾಕಲ್(Rough Tackle) ಮಾಡಿದ್ದಕ್ಕೆ ಪಳಂಗಪ್ಪನವರು ಕೈ ಸನ್ನೆಯಲ್ಲಿ ಅವರನ್ನು ಕರೆದರು. ಆಗ ಒಲಂಪಿಯನ್ ಕರ್ವಾಲೋ ತಲೆಬಾಗಿ ತಪ್ಪನ್ನು ಒಪ್ಪಿಕೊಂಡರು. ಈ ಪಂದ್ಯಾವಳಿ ಬಹಳಷ್ಟು ಕಮ್ಮಿ ವಿಸಿಲ್ ಗಳು ಹಾಗೂ ಒಳ್ಳೆಯ ತೀರ್ಪುಗಾರಿಕೆಗೆ ಸೈ ಎನಿಸಿಕೊಂಡಿತು. ಇವರ ನೆಚ್ಚಿನ ವಿಸಿಲ್ fox - 40 ಹಾಗು Acme . 
ಅಂಪೈರ್ ಎಂದರೆ ಹೇಗಿರಬೇಕು....
       ಅಂಪೈರ್ ದೈಹಿಕವಾಗಿ  ಸದೃಢತೆ ಹೊಂದಿರಬೇಕು, ಹಾಕಿ ನಿಯಮಗಳ ಸರಿಯಾದ ಜ್ಞಾನವನ್ನು ಹೊಂದಿರಬೇಕು, ಅಂಪೈರಿಂಗ್‌ಗೆ ಕ್ರೀಡಾಂಗಣದಲ್ಲಿ ಸರಿಯಾದ ಸ್ಥಾನ ಕಲ್ಪಿಸಬೇಕು, ಸ್ಪಷ್ಟವಾದ ಚೆಂಡಿನ ಗೋಚರತೆಯನ್ನು ಹೊಂದಿರಬೇಕು, ಬ್ಯಾಕ್‌ಲೈನ್‌ನಿಂದ ಎದುರಾಳಿಗಳ 25 ಮೀಟರ್‌ವರೆಗೆ ಚಲನಶೀಲತೆ ಅತ್ಯಗತ್ಯ, ವಿಸಿಲ್ ಜೋರಾಗಿ ಮತ್ತು ಸ್ಪಷ್ಟವಾಗಿರಬೇಕು, ಅಂಪೈರಿಂಗ್‌ನಲ್ಲಿ ಸಿಗ್ನಲಿಂಗ್ ಮುಖ್ಯ, ತೀರ್ಪು ಮತ್ತು ವಿವೇಚನೆ ಬಹಳ ಮುಖ್ಯ, ತಪ್ಪಿತಸ್ಥ ಆಟಗಾರನನ್ನು ಶಿಕ್ಷಿಸುವುದು ಸ್ಪಷ್ಟವಾಗಿರಬೇಕು, ಆಟಗಾರರು ಯಾವುದೇ  ಸ್ಪಷ್ಟೀಕರಣ ಕೇಳಿದರೆ ನಯವಾಗಿ ವಿವರಿಸಬೇಕು, ಅನಗತ್ಯ ಕಾರ್ಡ್‌ಗಳು ಆಟವನ್ನು ಹಾಳುಮಾಡುತ್ತವೆ ಮತ್ತು ವಿವಾದಕ್ಕೆ ಕಾರಣವಾಗುತ್ತವೆ ಆದುದರಿಂದ ಅಂಪೈರ್ ಎಚ್ಚರಿಕೆ ವಹಿಸಬೇಕು.
 ಅಂಪೈರ್ ಕರ್ತವ್ಯ 
      ಪಂದ್ಯಾಟಕ್ಕೆ ಮುನ್ನವೇ ವಾರ್ಮ್ ಅಪ್ ಆಗಬೇಕು. ಗೋಲ್ ಪೋಸ್ಟ್ ಗಳ ನೆಟ್, ಮೈದಾನದ ನಾಲ್ಕು ಮೂಲೆಯ ಬಾವುಟಗಳು ಹಾಗೂ ಲೈನ್ ಗಳನ್ನು ಪರಿಶೀಲಿಸಬೇಕು. 11 ಆಟಗಾರರು ತಂಡದಲ್ಲಿ ಇದ್ದಾರೆಯೇ ಎಂದು ಎಣಿಸಬೇಕು. ಗೋಲ್ ಕೀಪರ್ ತನ್ನ ಎಲ್ಲಾ ಸಾಮಗ್ರಿಗಳನ್ನು ಧರಿಸಿರಬೇಕು. 
        ಅಂಪೈರ್ ಜೊತೆಗೆ ಒಂದು ಸೆಟ್ ಕಾರ್ಡ್, ಸ್ಟಾಪ್ ವಾಚ್, ಎರಡು ವಿಶಿಲ್, ಹಾಕಿಯ ರೂಲ್ ಬುಕ್ ಹಾಗೂ ಪೆನ್ ಸದಾ ಇಟ್ಟಿರಬೇಕು. ಇಬ್ಬರು ತೀರ್ಪುಗಾರರು ಒಂದೇ ರೀತಿಯ ಶಬ್ದದ ವಿಶಿಲ್ ಬಳಸಬೇಕು. ಯಾವುದೇ ಒತ್ತಡಕ್ಕೂ ಮಣಿಯಬಾರದು. ಕಾಯಕವೇ ಕೈಲಾಸ ಎಂಬಂತಿರಬೇಕು.  
 ಕೌಟುಂಬಿಕ ಹಾಕಿ
       1997ರಲ್ಲಿ ಕೌಟುಂಬಿಕ ಹಾಕಿ ಪ್ರಾರಂಭಗೊಂಡಾಗ ಪಾಂಡಂಡ ಕುಟ್ಟಪ್ಪ ಅವರು ಇವರನ್ನು ಕರೆಸಿ ಫೈನಲ್ಸ್ ನ ತೀರ್ಪುಗಾರಿಕೆ ವಹಿಸಿದರು.  2013ವರೆಗೆ ಉಚಿತವಾಗಿ ಕೊಡಗಿನ ಕೌಟುಂಬಿಕ ಹಾಕಿಯಲ್ಲಿ ತೀರ್ಪುಗಾರಿಕೆ ಹಾಗೂ ಅಂಪೈರಿಂಗ್ ಶಿಬಿರ ನಡೆಸಿಕೊಟ್ಟರು. ಯಾವುದೇ ಅಹಿತಕರ ಘಟನೆ ನಡೆದಂತೆ ನೋಡಿಕೊಂಡು ಬಹಳ ಹೆಸರುವಾಸಿಯಾದ ಗುಂಡಿಗೆಯ ವ್ಯಕ್ತಿ.
      2010ರಲ್ಲಿ ಮನೆಯಪಂಡ ಕಪ್ ನಲ್ಲಿ 3ನೇ ಅಂಪೈರ್ ನಿಯಮವನ್ನು ಅಳವಡಿಸಿ, ಗೋಲ್ ಪೋಸ್ಟ್ ನ ಸನಿಹದಲ್ಲಿ ಕ್ಯಾಮರವನ್ನು ಇಟ್ಟು ಟಿವಿಯ ಮೂಲಕ ಗೊಂದಲಗಳನ್ನು ಅಲ್ಲೇ ನಿಭಾಯಿಸಿ, ಈ ಪ್ರಯತ್ನದಲ್ಲಿ ಯಶಸ್ಸನ್ನು ಕಂಡರು. 
      2 ಸೀನಿಯರ್ ನ್ಯಾಷನಲ್ಸ್ ನ ಪಂದ್ಯಾವಳಿಯ ನಿರ್ದೇಶಕ ಮತ್ತು ಅಂಪೈರ್ ನಿರ್ದೇಶಕರಾಗಿದ್ದರು.  ಭೂಪಾಲ್ ನ  ಮೊದಲ ಹಾಕಿ ಇಂಡಿಯಾ ಸೀನಿಯರ್ ನ್ಯಾಷನಲ್ಸ್ ನ ಪಂದ್ಯಾವಳಿ ನಿರ್ದೇಶಕರು ಹೌದು. BEML ನ ತಂಡದ ವ್ಯವಸ್ಥಾಪಕರಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದರು. 
     ಸುದೀರ್ಘ 11 ವರ್ಷಗಳ KSHA(ಕರ್ನಾಟಕ ಸ್ಟೇಟ್ ಹಾಕಿ ಅಸೋಸಿಯೇಷನ್) ನ ಎಂಪೈರ್ ಮಂಡಳಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಬೆಂಗಳೂರು ಹಾಕಿ ಅಸೋಸಿಯೇಷನ್ ಅಧ್ಯಕ್ಷರಾಗಿದ್ದಾರೆ. 
      ಇವರ ಪತ್ನಿ ಪ್ರೇಮಾ (ತಾಮನೆ ಮುಂಡ್ಯೋಳಂಡ) ಶಟಲ್ ಆಟಗಾರ್ತಿ, ಮಗ ಚೆಂಗಪ್ಪ ಕಾರ್ಪೊರೇಟ್ ಆಫೀಸ್ ನ ವ್ಯವಸ್ಥಾಪಕರಾಗಿದ್ದಾರೆ, ಚೆಂಗಪ್ಪ ಅವರ ಪತ್ನಿ ತೃಪ್ತಿ (ತಾಮನೆ ಚೊಟ್ಟಂಗಡ). ತೀರ್ಪುಗಾರಿಕೆ ಕೃತಜ್ಞತೆ ಇಲ್ಲದ ಕೆಲಸ. ಅದನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು ಎಂಬ ಭರವಸೆ ಇಂದಿನ ಕೊಡಗಿನ ತೀರ್ಪುಗಾರರಿಗೆ ಬೇಕು. ಕೊಡಗಿನ ಹಾಕಿಯು ಗಿನ್ನಿಸ್ ದಾಖಲೆಯತ್ತ ಮುನ್ನುಗ್ಗಿದ್ದಕ್ಕೆ ಬಹಳಷ್ಟು ಹರ್ಷ ವ್ಯಕ್ತಪಡಿಸಿದರು.  ಇವರ ಸೇವೆಯು ಹಾಕಿಗೆ ಹೀಗೆ ಮುಂದುವರೆಯಲಿ. ಇವರಂತೆಯೇ ಯುವ ಪ್ರತಿಭೆಗಳು ಹೊರಹೊಮ್ಮಲಿ. ಇವರ ಕುಟುಂಬಕ್ಕೆ ಶುಭವಾಗಲಿ. 

 
         ಕ್ರೀಡಾ ವಿಶ್ಲೇಷಣೆ
  ✍️-ಚೆಪ್ಪುಡೀರ ಕಾರ್ಯಪ್ಪ

news-details