ಅಯ್ಯಂಗೇರಿ
============================
ಕಳೆದ 18 ವರ್ಷಗಳ ಹಿಂದೆ ಗೋವಾದಲ್ಲಿ ಬರ್ಭರವಾಗಿ ಹತ್ಯೆಯಾಗಿದ್ದ ಕೊಡಗಿನ 14 ವರ್ಷದ ಬಾಲಕಿ ಸಫಿಯಾ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕೇರಳದ ಕಾಸರಗೋಡು ಜಿಲ್ಲಾ ನ್ಯಾಯಾಲಯ ನವೆಂಬರ್ 6ರಂದು ಸಫಿಯಾಳ ಅಸ್ಥಿಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸುವAತೆ ಅತ್ಯಂತ ಮಹತ್ವದ ಆದೇಶ ನೀಡಿತ್ತು. ಅದರಂತೆ ಸೋಮವಾರ ಇಸ್ಲಾಂ ಪದ್ದತಿಯಂತೆ ಸಫಿಯಾಳ ಹುಟ್ಟೂರು ಅಯ್ಯಂಗೇರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ನಾಪೋಕ್ಲು ಅಯ್ಯಂಗೇರಿ ನಿವಾಸಿ ಮೊಯ್ದು ಮತ್ತು ಆಯಿಷಾ ದಂಪತಿಯ ಪುತ್ರಿ ಸಫಿಯಾಳನ್ನು ಮನೆ ಕೆಲಸಕ್ಕಾಗಿ 2006ರಲ್ಲಿ ಕಾಸರಗೋಡು ಮುಳಿಯಾರ್ ನಿವಾಸಿ ಗೋವಾದಲ್ಲಿ ಖಾಸಗಿ ಗುತ್ತಿಗೆದಾರನಾಗಿದ್ದ ಕೆ.ಎ.ಹಂಸ ಎಂಬಾತ ಕರೆದುಕೊಂಡು ಹೋಗಿದ್ದ. ಸಫಿಯಾಳಿಗೆ ಹಂಸ ಮತ್ತವನ ಪತ್ನಿ ಮೈಮೂನ ಅವರುಗಳು ದಿನ ನಿತ್ಯ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದರು. ಮೈಮೂನಾ ಗೋವಾದಲ್ಲಿ ಮನೆ ಹೊಂದಿದ್ದು, ಸಫಿಯಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಬಿಸಿ ನೀರು ಬಿದ್ದು, ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿ ಜೀವನ್ಮರಣ ಸ್ಥಿಯಲ್ಲಿದ್ದಳು. ಈ ವೇಳೆ ಸಫಿಯಾಳನ್ನು ಆಸ್ಪತ್ರೆಗೆ ಕರದೊಯ್ದರೆ ಬಾಲ ಕಾರ್ಮಿಕ ಕಾನೂನಿನ ಅಡಿಯಲ್ಲಿ ಸಿಲುಕಿಕೊಳ್ಳುವುದಾಗಿ ತಿಳಿದು ಹಂಸ, ಮೈಮೂನ ಮತ್ತು ಆಕೆಯ ಸಹೋದರ ಎಂ.ಅಬ್ದುಲ್ಲ ಎಂಬವರು ಸಫಿಯಾಳನ್ನು 3 ಭಾಗಗಳಾಗಿ ಕತ್ತರಿಸಿ ಗೋವಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಬಳಿ ಹೂತು ಹಾಕಿದ್ದರು. ದಿನಗಳು ಕಳೆದ ಬಳಿಕ ಸಫಿಯಾ ಕಾಣೆಯಾಗಿರುವ ಕುರಿತು ಕಾಸರಗೋಡುವಿನ ಅಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಫಿಯಾ ಕಾಣೆಯಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದ ಅಲ್ಲಿನ ನಿವಾಸಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಿಬೇಕೆಂದು ‘ಸಫಿಯಾ ಹೋರಾಟ ಸಮಿತಿ’ ಮೂಲಕ ಭಾರೀ ಅಭಿಯಾನವನ್ನು ಆರಂಭಿಸಿದ್ದವು. ತೀವ್ರ ಸಂಚಲನ ಸೃಷ್ಟಿಸಿದ್ದ ಬಾಲಕಿ ಸಫಿಯಾಳ ಕೊಲೆ ಪ್ರಕರಣ ಆಧಾರವಾಗಿಟ್ಟುಕೊಂಡು ಮಲಯಾಳಂ ಭಾಷೆಯಲ್ಲಿ ಚಲನಚಿತ್ರ ಸಹ ತೆರೆಕಂಡಿತ್ತು. ಸಾರ್ವಜನಿಕರ ಒತ್ತಡ ತೀವ್ರವಾದ ಪರಿಣಾಮ ಅಲ್ಲಿನ ಸರಕಾರ 2 ವರ್ಷಗಳ ಬಳಿಕ ಪ್ರಕರಣವನ್ನು ಕಾಸರಗೋಡು ಜಿಲ್ಲಾ ಕ್ರೆöÊಂ ಬ್ರಾಂಚ್‌ಗೆ ಹಸ್ತಾಂತರಿಸಿತ್ತು. ತನಿಖೆ ನಡೆಸಿದ ಕ್ರೆöÊಂ ಬ್ರಾಂಚ್ ಪೊಲೀಸ್ ಅಧಿಕಾರಿಗಳು ಕೆ.ಎ.ಹಂಸ, ಆತನ ಪತ್ನಿ ಮೈಮೂನ ಮತ್ತು ಆಕೆಯ ಸಹೋದರ ಎಂ.ಅಬ್ದುಲ್ಲ ಅವರುಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸಫಿಯಾ ಕೊಲೆಯಾಗಿರುವುದು ಪತ್ತೆಯಾಗಿತ್ತು. 2008ರ ಜೂನ್ 5ರಂದು ಗೋವಾದ ನಿರ್ಮಾಣ ಹಂತದ ಸೇತುವೆ ಕಳೆ ಭಾಗ ಹೂತು ಹಾಕಲಾಗಿದ್ದ ಮೃತದೇಹದ ಕಳೇಬರವನ್ನು ಹೊರತೆಗೆದ ಪೊಲೀಸರು, ಅದನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿ ಕಳೇಬರ ಸಫಿಯಾಳದ್ದೇ ಎಂದು ದೃಢಪಡಿಸಿದ್ದರು. ಪ್ರಕರಣದ ಆರೋಪಿಗಳಾದ ಕೆ.ಎ.ಹಂಸ, ಆತನ ಪತ್ನಿ ಮೈಮೂನ ಮತ್ತು ಆಕೆಯ ಸಹೋದರ ಎಂ.ಅಬ್ದುಲ್ಲ, ಇವರಿಗೆ ಸಹಕರಿಸಿದ ಮೊಯ್ದು ಹಾಜಿ, ಅಡೂರು ಪೊಲೀಸ್ ಠಾಣೆಯ ಎಎಸ್‌ಐ ಗೋಪಾಲಕೃಷ್ಣ ಅವರುಗಳನ್ನು ಜೈಲಿಗೆ ಅಟ್ಟಿದ್ದರು. ಆ ಮೂಲಕ ಪೊಲೀಸರು ಸಫಿಯಾ ಕೊಲೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕಾಸರಗೋಡು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 2015 ಜುಲೈ 16ರಂದು ಪ್ರಕರಣದ ಪ್ರಮುಖ ಆರೋಪಿ ಹಂಸನಿಗೆ ಮರಣ ದಂಡನೆ ಹಾಗೂ 10 ಲಕ್ಷ ರೂಪಾ:ಯಿಗಳ ದಂಡ ವಿಧಿಸಿ ಆದೇಶಿಸಿತ್ತು. ಇನ್ನುಳಿದ ಆರೋಪಿಗಳಾದ ಮೈಮೂನ, ಆಕೆಯ ಸಹೋದರ ಎಂ.ಅಬ್ದುಲ್ಲನಿಗೆ ತಲಾ 6 ವರ್ಷ ಸಜೆ, 1 ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು. ಇನ್ನಿಬ್ಬರು ಆರೋಪಿಗಳ ವಿರುದ್ದ ಸೂಕ್ತ ಸಾಕ್ಷಾö್ಯಧಾರ ಕೊರತೆ ಕಾರಣ ಅವರನ್ನು ಪ್ರಕರಣದಿಂದ ನ್ಯಾಯಾಲಯ ಖುಲಾಸೆಗೊಳಿಸಿತ್ತು. ತದನಂತರ ನಡೆದ ಬೆಳವಣಿಗೆಯಲ್ಲಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಮರಣ ದಂಡನೆ ಶಿಕ್ಷೆ ರದ್ದು ಮಾಡಿ ಅದನ್ನು ಆಜೀವ ಕಾರಾಗೃಹ ವಾಸದ ಶಿಕ್ಷೆಯಾಗಿ ಮಾರ್ಪಡಿಸಿತ್ತು. ಕಾಸರಗೋಡು ಸಹಿತ ಕೇರಳ ರಾಜ್ಯದಲ್ಲೇ ತೀವ್ರ ಸಂಚಲನ ಮೂಡಿಸಿದ್ದ ಸಫಿಯಾ ಕೊಲೆ ಪ್ರಕರಣ ಅತ್ಯಂತ ಸೂಕ್ಷö್ಮ ವಿಚಾರವಾಗಿದ್ದ ಹಿನ್ನೆಲೆಯಲ್ಲಿ ಆಕೆಯ ಅಸ್ಥಿ ಪಂಜರವನ್ನು ನ್ಯಾಯಾಲಯದ ಆದೇಶದಂತೆ ಕೊಚ್ಚಿಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಸಂರಕ್ಷಿಸಿ ಇಡಲಾಗಿತ್ತು. ತಮ್ಮ ಪುತ್ರಿಯ ಅಂತಿಮ ವಿಧಿ ವಿಧಾನಗಳನ್ನು ಸಮುದಾಯದ ಪದ್ದತಿಯಲ್ಲಿ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಆಕೆಯ ಅಸ್ಥಿ ಪಂಜರವನ್ನು ತಮಗೆ ನೀಡುವಂತೆ ಸಫಿಯಾ ಪೋಷಕರಾದ ಮೊಯ್ದು ಮತ್ತು ಆಯಿಷಾ, ಕಾಸರಗೋಡು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 2024ರ ನವೆಂಬರ್ 6ರಂದು ಸಫಿಯಾಳ ಅಸ್ಥಿ ಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರ ಮಾಡುವಂತೆ ಆದೇಶ ನೀಡಿತ್ತು. ಅದರಂತೆ ನವೆಂಬರ್ 11ರ ಸೋಮವಾರ ಕೊಚ್ಚಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಸಫಿಯಾಳ ಅಸ್ಥಿ ಪಂಜರವನ್ನು ಪಡೆದುಕೊಂಡು ಸಂಜೆ ವೇಳೆಗೆ ಅಯ್ಯಂಗೇರಿ ಗ್ರಾಮಕ್ಕೆ ತರಲಾಯಿತು. ಅಯ್ಯಂಗೇರಿ ಹಳೇ ಮಸೀದಿಯಲ್ಲಿ ಸಫಿಯಾ ಅಸ್ಥಿ ಪಂಜರವನ್ನಿಟ್ಟು ಧರ್ಮ ಗುರುಗಳಾದ ಉಸ್ಮಾನ್ ಮರ್ಝೂಕಿ ಶಾಂತಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಅಯ್ಯಂಗೇರಿ ಮಸೀದಿಯ ಖಬರಸ್ಥಾನದಲ್ಲಿ ಸಫಿಯಾಳ ಅಸ್ಥಿ ಪಂಜರವನ್ನು ಅಂತ್ಯಕ್ರಿಯೆ ನೆರವೇರಿಸಲಾಯಿತು. ಇದರಿಂದಾಗಿ ಸುದೀರ್ಘ 18 ವರ್ಷಗಳ ಬಳಿಕ ಸಫಿಯಾಳ ಪೋಷಕರು, ಮಗಳ ಅಂತಿಮ ವಿಧಿ ವಿಧಾನ ನಡೆಸಿದಂತಾಯಿತು. ಈ ಸಂದರ್ಭ ಸಫಿಯಾಳ ತಂದೆ ಮೊಯ್ದು ಮತ್ತು ಇಬ್ಬರು ಸಹೋದರರು, ಅಯ್ಯಂಗೇರಿ ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾದರ್, ಗ್ರಾಮ ಪಂಚಾಯಿತಿ ಸದಸ್ಯ ರಶೀದ್ ಅಯ್ಯಂಗೇರಿ, ಪ್ರಮುಖರಾದ ಉಸ್ಮಾನ್, ಮೊಹಮದ್ ಹಾಗೂ ಹತ್ತಾರು ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಿವಿ ಒನ್ ನ್ಯೂಸ್, ಮಡಿಕೇರಿ