ಹಿರಿಯ ಬ್ಯಾಡ್ಮಿಂಟನ್ ಆಟಗಾರ ಮಚ್ಚೆಟೀರ ಲಾಲು
ಮಚ್ಚೆಟೀರ ಮುತ್ತಪ್ಪ ಹಾಗೂ ಮುತ್ತವ್ವ (ತಾಮನೆ ಮಾದೆಟ್ಟೀರ) ದಂಪತಿಯರ ಪುತ್ರನಾಗಿ ಲಾಲು ಅವರು 1951 ರಲ್ಲಿ ಕಡಗದಾಳುವಿನಲ್ಲಿ ಜನಿಸಿದರು.
ಶಿಕ್ಷಣ
ಲಾಲು ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಡಗದಾಳು, ಪಾಲಿಬೆಟ್ಟ ಹಾಗೂ ಸೆಂಟ್ ಆನ್ಸ್ ವಿರಾಜಪೇಟೆ ಹಾಗೂ ಅಮ್ಮತ್ತಿಯಲ್ಲಿ ಪಡೆದರು. ಕಾಲೇಜು ಶಿಕ್ಷಣವನ್ನು ಸರ್ಕಾರಿ ಕಾಲೇಜ್ ಮಡಿಕೇರಿಯಲ್ಲಿ ಪಡೆದರು.
ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ
ಲಾಲು ಅವರು 2ನೇ ತರಗತಿಯಲ್ಲಿರುವಾಗ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ ಅವರ ಗೆಲುವಿನ ಮೊದಲ ಹೆಜ್ಜೆ ಎಂದು ಹೇಳಬಹುದು. ಅದಾದ ನಂತರ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ 400 ಮೀಟರ್ ಓಟದಲ್ಲಿ ಬಹುಮಾನವನ್ನು ದಿವಂಗತ ಕೋದಂಡ ಪೂವಯ್ಯ ಅವರಿಂದ ಪಡೆದರು. ಪುನಃ ಎರಡನೇ ಬಾರಿಯೂ ಸಹ 400 ಮೀಟರ್ ಹಾಗು 4*400 ಮೀಟರ್ ರಿಲೇಯಲ್ಲಿ ವಿಜೇತರಾಗಿ, ಮೈಸೂರು ವಲಯವನ್ನು ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿದರು.
ಎಂ.ಬಿ.ಸದಾಶಿವ್
ಕೊಡಗು ಕಂಡ ಪ್ರತಿಭಾನ್ವಿತ ಕ್ರೀಡಾಪಟು ಎಂ.ಬಿ.ಸದಾಶಿವ್. ಬಹಳಷ್ಟು ಕೊಡಗಿನ ಕ್ರೀಡಾಪಟುಗಳಿಗೆ ಮಾರ್ಗದರ್ಶನ ನೀಡಿದ ಮಹಾನ್ ವ್ಯಕ್ತಿ. ಇವರ ಗರಡಿಯಲ್ಲಿ ಪಳಗಿದ ಆಟಗಾರರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ. ಹಾಗೆ ಮಾರ್ಗದರ್ಶನ ಪಡೆದ ಆಟಗಾರರಲ್ಲಿ ಲಾಲು ಕೂಡ ಒಬ್ಬರು. ನಾಯಕಂಡ ಅರುಣ್ ಕೂಡ ಲಾಲು ಅವರಿಗೆ ಮಾರ್ಗದರ್ಶನ ನೀಡಿದರು.
ಮೈಸೂರು ಯೂನಿವರ್ಸಿಟಿ
400 ಮೀಟರ್, 4 * 400 ಮೀಟರ್ ಮತ್ತು 4*100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಮೈಸೂರು ಯುನಿವರ್ಸಿಟಿಯ ಪರ 1969-71ರವರೆಗೆ ಬರೋಡ ಹಾಗೂ ಕತಕ್ ನಲ್ಲಿ ಪ್ರತಿನಿಧಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್
1972ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಕೆಲಸಕ್ಕೆ ಸೇರಿದರು. ಆರು ವರ್ಷಗಳ ಕಾಲ coorg-11 ನ ಎ- ಡಿವಿಜನ್ ಪರ ಹಾಕಿ ಆಡಿದರು. ನಂತರ ಅಧಿಕಾರಿಯಾಗಿ ಬಡ್ತಿ ಪಡೆದು ಧಾರವಾಡಕ್ಕೆ ವರ್ಗಾವಣೆಗೊಂಡರು.
ಬ್ಯಾಡ್ಮಿಂಟನ್ ನ ಆರಂಭಿಕ ದಿನಗಳು
ಲಾಲು ಅವರು ನಿವೃತ್ತ ಡೆಪ್ಯೂಟಿ ಪೊಲೀಸ್ ಕಮಿಷನರ್ ಜಿ.ಕೆ.ಬೇಕಲ್ ಅವರ ಮಾರ್ಗದರ್ಶನದಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭಿಸಿ, ಸ್ಥಳೀಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಹುಬ್ಬಳ್ಳಿ,ಧಾರವಾಡ ಹಾಗೂ ಬಾಗಲಕೋಟೆಯಲ್ಲಿ ಆಡಿ ವಿಜೇತರಾದರು.
ಅರಳಿದ ಪ್ರತಿಭೆ
ಬೆಂಗಳೂರಿಗೆ ಪುನಃ ವರ್ಗಾವಣೆ ಆದ ನಂತರ ಕೆನರಾ ಯೂನಿಯನ್ ಗೆ ಆಡಲು ಪ್ರಾರಂಭಿಸಿದರು ಇಲ್ಲಿ ಅವರ ಬ್ಯಾಡ್ಮಿಂಟನ್ ಪ್ರತಿಭೆ ಅರಳಲು ಪ್ರಾರಂಭಿಸಿತು.
ಲಾಲು ಅವರು 1996ರಲ್ಲಿ 45 ವರ್ಷ ಮೇಲ್ಪಟ್ಟ ಆಟಗಾರರ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗಳನ್ನು ಮೈಸೂರು, ಮಂಡ್ಯ, ಮಂಗಳೂರು ಹಾಗು ವಿಜಯನಗರ ಗಳಲ್ಲಿ ಆಡಿ ನಂ:01 ಬ್ಯಾಡ್ಮಿಂಟನ್ ಆಟಗಾರರಾಗಿ 1996-2001 ರವರೆಗೆ ತಮ್ಮ ಪ್ರಾಬಲ್ಯತೆ ಮೆರೆಯದರು.
ರಾಷ್ಟ್ರೀಯ ಚಾಂಪಿಯನ್ ಶಿಪ್
ಲಾಲು ಅವರು ಎರಡು ಬಾರಿ ಮುಂಬೈ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಸೆಮಿ ಫೈನಲ್ ತಲುಪಿದ್ದರು, ಆದರೆ ದುರಾದೃಷ್ಟವಶತ್ ಕೊನೆ ಕ್ಷಣದಲ್ಲಿ ಜಯಶೀಲರಾಗುವ ಅವಕಾಶ ತಪ್ಪಿಹೋಯಿತು.
ಚಿಕ್ಕ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ
ಇವರು ಭಾರತೀಯ ಸ್ಟೇಟ್ ಬ್ಯಾಂಕ್ ಹುಬ್ಬಳ್ಳಿಗೆ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ವರ್ಗಾವಣೆಗೊಂಡ ನಂತರ ಅಲ್ಲಿ ಆಡಲು ಸಮಯವಿರಲಿಲ್ಲ, ಆದ್ದರಿಂದ ಧಾರವಾಡದಲ್ಲಿ ಚಿಕ್ಕ ಮಕ್ಕಳಿಗೆ ಬ್ಯಾಡ್ಮಿಂಟನ್ ತರಬೇತಿ ನೀಡಲು ಪ್ರಾರಂಭಿಸಿದರು.
ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಸುದೀರ್ಘ ಸೇವೆ
ಲಾಲು ಅವರು ಎಸ್.ಬಿ.ಐ ಬೆಂಗಳೂರಿನಲ್ಲಿ ಮೊದಲ ಎ.ಜಿ.ಎಂ ಹೆಚ್.ಆರ್ ಆಗಿ ಬಡ್ತಿ ಪಡೆದರು. ಸುಧೀರ್ಘ 5 ವರ್ಷಕ್ಕೂ ಹೆಚ್ಚು ಕಾಲ ಎ.ಜಿ.ಎಂ ಹೆಚ್.ಆರ್ ಆಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರರಾದರು. 2011ರಲ್ಲಿ ಎಸ್.ಬಿ.ಐ ನಿಂದ ನಿವೃತ್ತಿ ಪಡೆದರು.
ಪ್ರಕಾಶ್ ಪಡುಕೋಣೆ ಕೋರ್ಟ್ಸ್
ಪ್ರಕಾಶ್ ಪಡುಕೋಣೆ ಹಾಗೂ ಉಭೈಕರ್ ಅವರ ಸಲಹೆ ಮೇರೆಗೆ ಕೆನರಾ ಯೂನಿಯನ್ ಇವರನ್ನು 7 ರಿಂದ 15 ವರ್ಷದ ಆಟಗಾರರಿಗೆ ತರಬೇತಿದಾರರನ್ನಾಗಿ ನೇಮಿಸಿತು. ಇವರ ತರಬೇತಿಯಲ್ಲಿ 13 ರಿಂದ 15 ವರ್ಷದೊಳಗಿನ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ರಾಜ್ಯಮಟ್ಟದಲ್ಲಿ ಸೆಮಿಫೈನಲ್ ವರೆಗೂ ತಲುಪಿದರು. ಆದರೆ ಕೋವಿಡ್ ನಿಂದಾಗಿ ಇವರು ತಮ್ಮ ತರಬೇತಿಯನ್ನು ಮೊಟಕುಗೊಳಿಸಬೇಕಾಯಿತು.
70ರ ಇಳಿವಯಸ್ಸಿನಲ್ಲೂ ಬ್ಯಾಡ್ಮಿಂಟನ್
ಲಾಲು ಅವರು ಡಬಲ್ಸ್ ಮತ್ತು ಸಿಂಗಲ್ಸ್ ನಲ್ಲಿ, 70 ವರ್ಷ ಮೇಲ್ಪಟ್ಟ ಬ್ಯಾಡ್ಮಿಂಟನ್ ಪಂದ್ಯಾವಳಿಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು.
ವರ್ಲ್ಡ್ ಮಾಸ್ಟರ್ಸ್
2023ರ ದಕ್ಷಿಣ ಕೊರಿಯಾದ, ಜಿಯೊಂಜುನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಆದರೆ ಸೆಮಿಫೈನಲ್ ನಲ್ಲಿ ಗಾಯಗೊಂಡು ಪಂದ್ಯಾವಳಿಯಿಂದ ಅರ್ಧಕ್ಕೆ ಹಿಂದೆ ಸರಿಯಬೇಕಾಯಿತು.
ಲಾಲು ಅವರ ಪತ್ನಿ ಚಂದ್ರಪ್ರಭಾ, ಮಗ ಪ್ರಶಾಂತ್ ಬಿದ್ದಪ್ಪ ಇಂಗ್ಲೆಂಡ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರು ಯೂನಿವರ್ಸಿಟಿಯನ್ನು ಅಥ್ಲೆಟಿಕ್ಸ್ ನಲ್ಲಿ ಪ್ರತಿನಿಧಿಸಿದ್ದರು.
2024 ವರ್ಲ್ಡ್ ಮಾಸ್ಟರ್ಸ್
2023ರಲ್ಲಿ ಅರ್ಧಕ್ಕೆ ಮೊಟಕುಗೊಂಡ ಪಂದ್ಯಾವಳಿಯನ್ನು ಈ ಬಾರಿ ಪೂರ್ಣಗೊಳಿಸಲೇಬೇಕು ಎಂಬ ಛಲದೊಂದಿಗೆ ಲಾಲು ಅವರು 2024ರ ವರ್ಲ್ಡ್ ಮಾಸ್ಟರ್ಸ್ ಗೆ ತಯಾರಿ ನಡೆಸುತ್ತಿದ್ದು, ಇವರು ಈ ಬಾರಿ ಜಯಶೀಲರಾಗಿ ಭಾರತಕ್ಕೆ ಕೀರ್ತಿಯನ್ನು ತರಲಿ ಎಂಬುದೇ ಕ್ರೀಡಾಭಿಮಾನಿಗಳ ಆಸೆ.
ಲಾಲು ಅವರ ಅನಿಸಿಕೆ
ಶಿಸ್ತು, ಆಸಕ್ತಿ, ಸಮರ್ಪಣೆ (Decepline, Determination, Dedication) ಇದ್ದರೆ ಸಾಕು, ಏನು ಬೇಕಾದರೂ ಸಾಧಿಸಬಹುದು, ಅದಕ್ಕೆ ವಯಸ್ಸಿನ ಮಿತಿ ಇಲ್ಲ, ಬೆರೆಯವರು ಸಹಾಯಕ್ಕೆ ಬರುತ್ತಾರೆ ಎಂದು ಕೂತು ಕಾಯಬೇಕಿಲ್ಲ. ನಾವು ಛಲತೊಟ್ಟು ಸೋಲು ಗೆಲುವಿನ ಭಯವಿಲ್ಲದೆ ಮುನ್ನುಗ್ಗಬೇಕು ಎಂಬುದು ಲಾಲು ಅವರ ಮನದಾಳದ ಮಾತುಗಳು.
ಕೊಡಗಿನಲ್ಲಿ ಬಹಳಷ್ಟು ಯುವ ಬ್ಯಾಡ್ಮಿಂಟನ್ ಆಟಗಾರರಿದ್ದಾರೆ. ಅವರೆಲ್ಲ ಲಾಲು ಅವರ ಈ ಲೇಖನದಿಂದ ಬ್ಯಾಡ್ಮಿಂಟನ್ ಆಟದಲ್ಲಿ ಮುಂದುವರಿಯಲು ಹುಮ್ಮಸ್ಸು ಹಾಗೂ ಪ್ರೋತ್ಸಾಹ ಸಿಗಲಿ ಎಂಬುದೇ ಈ ಲೇಖನದ ಮೂಲ ಉದ್ದೇಶ. ಇವರು ಕೊಡಗಿನ ಯುವ ಬ್ಯಾಡ್ಮಿಂಟನ್ ಆಟಗಾರರಿಗೆ ಮಾರ್ಗದರ್ಶನ ನೀಡಲಿ. ಇವರ ಕುಟುಂಬಕ್ಕೆ ಶುಭವಾಗಲಿ.
ಕ್ರೀಡಾ ವಿಶ್ಲೇಷಣೆ
✍️-ಚೆಪ್ಪುಡೀರ ಕಾರ್ಯಪ್ಪ