ಮಡಿಕೇರಿ ತಾಲೂಕಿನ ಕೆಲವು ಭಾಗಗಳಲ್ಲಿ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮದೆನಾಡು, ಎರಡನೇ ಮೊಣ್ಣಂಗೇರಿ, ಬೆಟ್ಟತ್ತೂರು, ರಾಮಕೊಲ್ಲಿ, ದೇವಸ್ತೂರು, ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಿಂಭಾಗದ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಬುಧವಾರ ಬೆಳಗಿನ ೧೦.೫೦ರ ಸಮಯದಲ್ಲಿ ಈ ಅನುಭವವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮದೆನಾಡು ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಬೆಳಗಿನ ೧೦ ಗಂಟೆ ೪೯ ನಿಮಿಷ ೫ ಸೆಕೆಂಡ್ ವೇಳೆಗೆ ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವಂತೆ ‘೧.೬ ಮ್ಯಾಗ್ನಟ್ಯೂಡ್’ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕ ಅಧಿಕೃತವಾಗಿ ಭೂಮಿ ಕಂಪಿಸಿರುವುದನ್ನು ದೃಢಪಡಿಸಿದೆ. ಮದೆ ಗ್ರಾಮದ ವಾಯುವ್ಯ ದಿಕ್ಕಿನ ೨.೪ ಕಿ.ಮೀ ದೂರದಲ್ಲಿ ಭೂಮಿಯ ೫ ಕಿ.ಮೀ ಆಳದಲ್ಲಿ ಈ ಕಂಪನದ ಕೇಂದ್ರ ಬಿಂದುವಿತ್ತು. ಪರಿಣಾಮ ಒಟ್ಟು ೧೫ರಿಂದ ೨೦ ಕಿ.ಮೀ ವ್ಯಾಪ್ತಿಯಲ್ಲಿ ಅಲ್ಪ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕ ಸ್ಪಷ್ಟಪಡಿಸಿದೆ. ಇದು ಭೂಪದರಗಳ ಚಲಿಸುವಿಕೆಯ ಪರಿಣಾಮ ಉಂಟಾದ ಅಲ್ಪ ಪ್ರಮಾದ ಕಂಪನವಾಗಿದೆ. ಈ ಕಂಪನಗಳು ಯಾವುದೇ ರೀತಿಯ ಅನಾಹುತಗಳನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಕಂಪನದ ಅನುಭವ ಉಂಟಾದ ಪ್ರದೇಶದ ನಿವಾಸಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕ ಮಾಹಿತಿ ನೀಡಿದೆ.