ಶ್ರೀ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ಗೆ ಒಳಪಟ್ಟ ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ಬಿಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಬಿ.ಕೆ.ಸಿಂಚನ, ಯೋಗಾಸನದ ಮೂರು ಪ್ರಕಾರಗಳಲ್ಲಿ ವಿಶಿಷ್ಟ ಸಾಧನೆಯೊಂದಿಗೆ ಶಾಲೆ ಆವರಣದಲ್ಲಿ ‘ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ತನ್ನ ಹೆಸರನ್ನು ದಾಖಲಿಸಿ ಅಪೂರ್ವ ಸಾಧನೆ ಗೈದಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಏಷಿಯಾ ವಿಭಾಗದ ಮುಖ್ಯಸ್ಥರು ಹಾಗೂ ತೀರ್ಪುಗಾರರಾಗಿ ಪಾಲ್ಗೊಂಡಿದ್ದ ಡಾ.ಮನೀಶ್ ಬಿಷ್ಣೋಯ್ ಅವರ ಸಮ್ಮುಖದಲ್ಲಿ ಸಿಂಚನ ಯೋಗಾಸನಗಳನ್ನು ಪ್ರದರ್ಶಿಸಿ ವಿಶ್ವ ದಾಖಲೆಗೆ ಸೇರ್ಪಡೆಗೊಂಡಿರುವುದು ವಿಶೇಷ. ಈ ಸಂದರ್ಭ ಡಾ.ಮನೀಶ್ ಬಿಷ್ಣೋಯ್ ಅವರು, ‘ಡಿಂಪಾಸನ’ದಲ್ಲಿ ೧೪ ಮೀಟರ್ ಅನ್ನು ಕ್ರಮಿಸುವ ಮೂಲಕ ಸಿಂಚನ ತನ್ನ ಹೆಸರಿನಲ್ಲೇ ಇದ್ದ ೧೦ ಮೀಟರ್ ದಾಖಲೆಯನ್ನು ಮುರಿದು ವಿಶ್ವ ದಾಖಲೆ ಮಾಡಿದ್ದಾಳೆ. ‘ಉರಭ್ರಾಸನ’ದಲ್ಲಿ ೧.೦೪ ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಹಾಗೂ ‘ಮೃಗ ಮುಖಾಸನ’ದಲ್ಲಿ ೧.೪೫ ನಿಮಿಷ ಏಕಸ್ಥಿತಿಯಲ್ಲಿ ಇರುವ ಮೂಲಕ ಈಕೆ ಏಕಕಾಲದಲ್ಲಿಯೇ ವಿಶ್ವ ದಾಖಲೆಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದಾಗಿ ಘೋಷಿಸಿದರು. ಯುಎಸ್ ಅನ್ನು ಮುಖ್ಯ ನೆಲೆಯನ್ನಾಗಿ ಹೊಂದಿರುವ ‘ಗೋಲ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆ ವಿಶ್ವದ ಅಪರೂಪದ ವಿದ್ಯಮಾನಗಳನನ್ನು ದಾಖಲಿಸಿಕೊಂಡು ಬರುತ್ತಿದೆ. ೧೧ ವರ್ಷದ ಬಾಲಕಿ ಒಂದೇ ಬಾರಿಗೆ ಮೂರು ವಿಶ್ವ ದಾಖಲೆ ಮಾಡಿರುವುದು ಅಪರೂಪದಲ್ಲಿ ಅಪರೂಪದ ವಿದ್ಯಮಾನ ಎಂದು ಡಾ. ಮನೀಶ್ ಬಿಷ್ಣೋಯ್ ಅಭಿಪ್ರಾಯಿಸಿದರು. ಯೋಗಾಸನದಲ್ಲಿ ೩ ವಿಶ್ವ ದಾಖಲೆ ಮಾಡಿದ್ದಕ್ಕಾಗಿ ಡಾ. ಮನೀಶ್ ಬಿಷ್ಣೋಯ್ ಅವರು ಬಿ.ಕೆ. ಸಿಂಚನಗಳಿಗೆ ಅತಿಥಿ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು. ಸಿಂಚನಳ ವಿಶ್ವ ದಾಖಲೆಯನ್ನು ಸಾಕ್ಷೀಕರಿಸಿದ ಶ್ರೀ ಆದಿ ಚುಂಚನಗಿರಿ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಮಾತನಾಡಿ, ನಮ್ಮ ಶಾಲೆಯ ಬಾಲಕಿ ವಿಶ್ವ ದಾಖಲೆ ಮಾಡಿರುವುದು ನಮ್ಮ ಹೆಮ್ಮೆಯಾಗಿದೆ. ತಂದೆ ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಈಕೆ ಮತ್ತಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಬೈಟ್-
ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಇದೊಂದು ಅಪರೂಪದ ಕ್ಷಣ. ಸಿಂಚನಳ ವಿಶ್ವ ದಾಖಲೆ ಈ ನಾಡಿಗೆ, ರಾಜ್ಯಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಯೋಗಾಸನದ ಮೂಲಕ ಆರೋಗ್ಯದೊಂದಿಗೆ ಏಕಾಗ್ರತೆಯನ್ನು ಕಂಡುಕೊಳ್ಳಲು ಸಾಧ್ಯವಿದ್ದು, ಪ್ರತಿಯೊಬ್ಬರು ಇದರತ್ತ ಆಸಕ್ತರಾಗುವಂತೆ ಕರೆ ನೀಡಿದರು.
ಬೈಟ್-
ಕನ್ನಡ ಸಾಹಿತ್ಯ ಪರಿಷತ್‌ನ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್ ಅವರು, ಬಾಲಕಿಯ ಸಾಧನೆಗೆ ಶುಭ ಹಾರೈಸಿದರು.
ಬೈಟ್-
ವಿಶೇಷ ಕಾರ್ಯಕ್ರಮದಲ್ಲಿ ಸಿಂಚನಳ ತಾಯಿ ರೇಣುಕ, ತಂದೆ ಬಿ.ಸಿ.ಕೀರ್ತಿಕುಮಾರ್ ಹಾಗೂ ವೇದಿಕೆಯಲ್ಲಿ ಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ ಬಿ.ಆರ್.ಜೋಯಪ್ಪ, ಡಿಡಿಪಿಐ ರಂಗಧಾಮಪ್ಪ, ನಿವೃತ್ತ ಉಪನ್ಯಾಸಕ ಶಿವರಾಂ, ಆಯುಷ್ ಇಲಾಖೆಯ ಡಾ.ಅರುಣ್ ಉಪಸ್ಥಿತರಿದ್ದರು. ಇದೇ ಸಂದರ್ಭ ಅತಿಥಿ ಗಣ್ಯರನ್ನು ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು. ಬಿಜಿಎಸ್ ಶಾಲೆಯ ಆವರಣದಲ್ಲಿ ವಿಶ್ವ ದಾಖಲೆಯ ಸಿಂಚನಳ ಯೋಗಾಸನ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಾಲಕಿಯ ವಿಶ್ವ ದಾಖಲೆಯ ಯೋಗ ಪ್ರದರ್ಶನವನ್ನು ಗ್ರಾಮಸ್ಥರು, ಶಾಲಾ ಶಿಕ್ಷಕ ವೃಂದ, ಮಕ್ಕಳು ಕುತೂಹಲದಿಂದ ವೀಕ್ಷಿಸಿದರು. ನೋಡಲು ಅತ್ಯಂತ ಸುಲಭದಂತೆ ಕಾಣುವ ಕಠಿಣ ಪರಿಶ್ರಮದಿಂದ ಮಾತ್ರವೇ ಸಾಧಿಸಬಲ್ಲ ಯೋಗಾಸನದ ಭಂಗಿಗಳನ್ನು ಕಂಡು ಮಕ್ಕಳು ಸಹಿತ ಗ್ರಾಮಸ್ಥರು ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿನಿ ಸಿಂಚನಳನ್ನು ಹುರಿದುಂಬಿಸಿದರು.