ಇನ್ಮುಂದೆ ಕರ್ನಾಟಕದಲ್ಲಿ ಓಲಾ ಊಬರ್ ರ್ಯಾಪಿಡೊ ಬೈಕ್ ಸೇವೆಗೆ ತಾತ್ಕಾಲಿಕ ನಿರ್ಬಂಧ! -
ಬೆಂಗಳೂರು: ಮುಂದಿನ ಆರು ವಾರಗಳಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುವ ಬೈಕ್ ಟ್ಯಾಕ್ಸಿಗಳನ್ನು ಸ್ಥಗಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ದ್ವಿಚಕ್ರವನ್ನು ಸಾರಿಗೆ ವಾಹನಗಳಾಗಿ ಪರಿವರ್ತಿಸಿ ನೋಂದಾಯಿಸಲು 2022 ರಲ್ಲಿ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದರು.
ಈ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ವಜಾಗೊಳಿಸಿ , ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಓಲಾ, ಉಬರ್ ಮತ್ತು ರ‍್ಯಾಪಿಡೋಗಳಿಗೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದಿನ ಆರು ವಾರಗಳ ಒಳಗೆ ನಿರ್ಬಂಧಿಸಬೇಕು ಎಂದು ಕೋರ್ಟ್ ಹೇಳಿದ್ದು, ರ‍್ಯಾಪಿಡೋ, ಊಬರ್, ಓಲಾ ಸೇರಿದಂತೆ ಇತರೆ ಎಲ್ಲಾ ಬೈಕ್ ಟ್ಯಾಕ್ಸಿಗಳ ಸೇವೆ ನಿಲ್ಲಿಸಲಾಗುತ್ತದೆ. 3 ತಿಂಗಳ ಒಳಗಾಗಿ ಮಾರ್ಗಸೂಚಿ ಹೊರಡಿಸಬೇಕು ಎಂದು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ.
ಕೋರ್ಟ್ ಆದೇಶದಿಂದ ಬೈಕ್ ಟ್ಯಾಕ್ಸಿ ಕಂಪನಿಗಳಿಗೆ ದೊಡ್ಡ ಹಿನ್ನಡೆ ಸಾಧ್ಯತೆ ಇದ್ದು, ಸರ್ಕಾರವು ಮೋಟಾರು ವಾಹನ ಕಾಯ್ದೆ, 1988 ರ ಸೆಕ್ಷನ್ 3 ರ ಅಡಿಯಲ್ಲಿ ಸಂಬಂಧಿತ ಮಾರ್ಗಸೂಚಿಗಳನ್ನು ಹೊರಡಿಸದ ಹೊರತು ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಕಾರ್ಯನಿರ್ವಹಿಸುವಂತಿಲ್ಲ. ಆರು ವಾರಗಳ ಒಳಗೆ ಅಂತಹ ಎಲ್ಲಾ ಸೇವೆಗಳು ಸ್ಥಗಿತಗೊಳ್ಳುವಂತೆ ನೋಡಿಕೊಳ್ಳುವಂತೆ ನ್ಯಾಯಾಲಯ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.