Breaking News
   
   
   

ಕಾಫಿ ತೋಟವೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು-ನೆಲ್ಯಹುದಿಕೇರಿ ಬಳಿಯ ಅತ್ತಿಮಂಗಲದಲ್ಲಿ ದುರ್ಘಟನೆ…..

ಕೊಡಗು

news-details

ಆಹಾರ ಅರಸಿ ಕಾಡಿನಿಂದ ಕಾಫಿ ತೋಟಕ್ಕೆ ಬಂದ ಕಾಡಾನೆಯೊಂದು  ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ  ಸಮೀಪದ ಅತ್ತಿಮಂಗಲ ಬಳಿಯ  ಕಾಫಿ ತೋಟವೊಂದರಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಹಾವಳಿ ತಡೆಗೆ ಅಳವಡಿಸಲಾಗಿದ್ದ ಸೋಲಾರ್ ತಂತಿಯ ಮೂಲಕ ವಿದ್ಯುತ್ ಸ್ಪರ್ಶ ಗೊಂಡಿರುವ ಕಾರಣದಿಂದ ೩೬ ವರ್ಷ ಪ್ರಾಯದ ಗಂಡಾನೆ ಮೃತಪಟ್ಟಿದೆ ಎಂದು  ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರ ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.    ಮಾಹಿತಿ ಅರಿತು ಚೆಸ್ಕಾಂ ಇಲಾಖೆ  ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯುತ್ ಮಾರ್ಗದ ಲೈನ್‌ನಿಂದ ವಿದ್ಯುತ್ ಪ್ರವಹಿಸಿ, ಈ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ ಅಧಿಕಾರಿಗಳು, ಸೋಲಾರ್ ತಂತಿಗೆ  ಅಕ್ರಮ ವಿದ್ಯುತ್  ಸರಬರಾಜು ಆಗಿರುವ ಕಾರಣದಿಂದ ಕಾಡಾನೆ ಮೃತಪಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ ಕಾಫಿ ತೋಟದ ಕಾರ್ಮಿಕರೊರ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಕಾಡಾನೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.  ಸೋಲಾರ್ ತಂತಿಯ ಮೂಲಕ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಕಾಡಾನೆಯ ಮರಣೋತ್ತರ  ಪರೀಕ್ಷೆ ಹಾಗೂ ಅಂತ್ಯ ಸಂಸ್ಕಾರಕ್ಕೆ  ಕಾಫಿ ತೋಟದವರು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ಈ ಹಿನ್ನೆಲೆಯಲ್ಲಿ ಕಾಡಾನೆಯ ಕಳೇಬರವನ್ನು ಕ್ರೇನ್ ಹಾಗೂ ಜೆಸಿಬಿ ಬಳಸಿ  ಲಾರಿ ಮೂಲಕ ಸಮೀಪದ ಅರಣ್ಯಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.  ಘಟನಾ ಸ್ಥಳದಲ್ಲಿ ಎಸಿಎಫ್ ಗೋಪಾಲ್, ಆರ್‌ಎಫ್‌ಓ ರತನ್ ಕುಮಾರ್, ಡಿಆರ್‌ಎಫ್ ಸುಬ್ರಾಯ, ಅರಣ್ಯ ಇಲಾಖೆ ವನ್ಯಜೀವಿ ವೈದ್ಯರಾದ ಚಿಟ್ಟಿಯಪ್ಪ, ಶಿಂಧೆ, ಚೆಸ್ಕಾಂ ಇಲಾಖೆ ಅಧಿಕಾರಿ ಮಂಜುನಾಥ್ ಸೇರಿದಂತೆ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.

news-details