ಬಸ್ ಪ್ರಯಾಣದರ ಏರಿಕೆ ಸಹಜ ಆಡಳಿತಾತ್ಮಕ ಪ್ರಕ್ರಿಯೆ
ತೆನ್ನಿರ ಮೈನಾ ಸ್ಪಷ್ಟನೆ
********
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಪ್ರಯಾಣದ ದರವನ್ನು ರಾಜ್ಯ ಸರ್ಕಾರ ಹೆಚ್ಚಿಸಿರುವುದು ಆಡಳಿತಾತ್ಮಕ ಸಹಜ ಪ್ರಕ್ರಿಯೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ರವರು ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಕಳೆದ ಐದು ವರ್ಷಗಳಿಂದ ಬಸ್ ಪ್ರಯಾಣ ದರ ಏರಿಕೆ ಆಗಿರಲಿಲ್ಲ.ಡಿಸೆಲ್ ದರ ಏರಿಕೆ,ಬಸ್ ಬಿಡಿ ಭಾಗಗಳು ಯಂತ್ರೋಪಕರಣಗಳ ಬೆಲೆ ಹೆಚ್ಚಳವಾದ ಹಿನ್ನಲೆಯಲ್ಲಿ ಸಂಸ್ಥೆ ನೀಡಿದ ಪರಿಷ್ಕರಣ ವರದಿಯನ್ನು ಗಮನಿಸಿ ಸರ್ಕಾರ ಬಸ್ ಪ್ರಯಾಣ ದರವನ್ನು ಶೇ 15 ರಷ್ಟು ಹೆಚ್ಚು ಮಾಡಲು ಒಪ್ಪಿಗೆ ನೀಡಿದ್ದು ಇದು ಎಲ್ಲಾ ಸರ್ಕಾರಗಳು ಮಾಡುವಂತಹ ತೀರ್ಮಾನಗಳು ಎಂದು ತಿಳಿಸಿದ್ದಾರೆ.
ಬಸ್ ಪ್ರಯಾಣ ಏರಿಕೆ ಶಕ್ತಿ ಯೋಜನೆಯ ನಷ್ಟ ಭರಿಸಲು ಎಂದು ಬಿ.ಜೆ.ಪಿ ಆರೋಪ ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾದದ್ದು.ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ ಸರ್ವಕಾಲಿಕ ಜನಪರ ಯೋಜನೆಯಾಗಿದ್ದು ಇದಕ್ಕೂ ಪ್ರಯಾಣ ದರ ಏರಿಕೆಗೂ ಯಾವ ಸಂಭಂದವೂ ಇಲ್ಲಾ ಎಂದು ತಿಳಿಸಿರುವ ತೆನ್ನಿರ ಮೈನಾ ರವರು 25-2-2020 ರಂದು ಕರ್ನಾಟಕ ಸಾರಿಗೆ ನಿಗಮದ ಪರಿಷ್ಕರಣೆಯ ಕೋರಿಯ ಮೇರೆಗೆ ಅಂದಿನ ಬಿ.ಜೆ.ಪಿ ಸರ್ಕಾರ ಶೇ 12 ರಷ್ಟು ಪ್ರಯಾಣ ದರ ಏರಿಸಿದ ಆದೇಶದ ಪ್ರತಿಯನ್ನು ಪ್ರದರ್ಶನ ಮಾಡಿ ಅಂದು ಯಾವ ಉಚಿತ ಯೋಜನೆ ಇಲ್ಲದಿದ್ದರೂ ಯಾಕೆ ಬಸ್ ಪ್ರಯಾಣ ಏರಿಕೆ ಮಾಡಿದ್ದರು ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದ್ದಾರೆ.
ಪಂಚ ಗ್ಯಾರೆಂಟಿ ಯೋಜನೆಗಳು ಜನತೆಯ ಬಾಳನ್ನು ಹಸನುಗೊಳಿಸುವ ಮತ್ತು ಬದುಕನ್ನು ಸುಧಾರಿಸುವ ಜನಪರ ಯೋಜನೆಗಳಾಗಿದ್ದು ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳದಿರಿ ಎಂದು ಬಿಜೆಪಿ ಯವರನ್ನು ತೆನ್ನಿರ ಮೈನಾ ಕುಟುಕಿದ್ದಾರೆ.