ಹುಣಸೂರು : ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯ ಕಂದಾಯ, ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸಮಿತಿ ವತಿಯಿಂದ ಹನಗೋಡು ನಾಡಕಛೇರಿ ಎದುರು ಪ್ರತಿಭಟನೆ ನಡೆಯಿತು.
ನಾಡ ಕಛೇರಿ ಮುಂಭಾಗ ಸಮಾವೇಶಗೊಂಡ ಪ್ರತಿಭಟನಾಕಾರರು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸರಕಾರದ ವಿರುದ್ದ ದಿಕ್ಕಾರ ಮೊಳಗಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ದೊಡ್ಡಹೆಜ್ಜೂರು ನಾಗೇಶ್ ಹನಗೋಡು ನಾಡಕಛೇರಿಯಲ್ಲಿ ಸಕಾಲದಲ್ಲಿ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ. ತಾಲ್ಲೂಕು ಆಡಳಿತ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ದಲಿತರಿಗೆ ಸಾಗುವಳಿ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಗ್ರಾಮ ಪಂಚಾಯ್ತಿಯ ನರೇಗಾ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ಸವಲತ್ತು ಸಿಗುತ್ತಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಜನರಿಗೆ ವನ್ಯ ಜೀವಿಗಳಿಂದ ಆಗುತ್ತಿರುವ ಅನಾಹುತದ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಹುಣಸೂರು ನಗರ ಮತ್ತು ಗ್ರಾಮಗಳ ವ್ಯಾಪ್ತಿಯ ದಲಿತ, ಬಡಕುಟುಂಬಗಳು ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಾಮಾಜಿಕ ಕುಟುಂಬ ಭದ್ರತೆ ಯೋಜನೆಯಡಿ ವೃದ್ದರು, ವಿಧವೆಯರು, ವೀಕಲಾಂಗರು ಶೋಷಣೆಗೊಳಗಾಗುತ್ತಿದ್ದಾರೆ ಈ ಎಲ್ಲಾ ನಿರ್ಲಕ್ಷ್ಯವನ್ನು ಖಂಡಿಸಿ, ದೊಡ್ಡಹೆಜ್ಜೂರು, ಭರತವಾಡಿ, ಹಿಂಡಗುಡ್ಲು, ದಾಸನಪುರ ಗ್ರಾಮಗಳ ದಲಿತ ಸಮುದಾಯಕ್ಕೆ ಸ್ಮಶಾನ ಕಲ್ಪಿಸುವಲ್ಲಿ ತಾಲ್ಲೂಕು ಆಢಳಿತ ವಿಫಲವಾಗಿದೆ ಎರಡು ವರ್ಷಗಳ ಹಿಂದೆ ದೊಡ್ಡಹೆಜ್ಜೂರು ಗ್ರಾ.ಪಂನ ಗ್ರಾಮ ಸಭೆಯಲ್ಲಿ ಆಯ್ಕೆಯಾಗಿರುವ ಮನೆ ಮಂಜೂರಾತಿ ವಿಳಂಬ, ಕರ್ಣಕುಪ್ಪೆ ಗ್ರಾಮದ ದಲಿತ ಕುಟುಂಬದ ಸಾಗುವಳಿ ಜಮೀನನ್ನು ಬೇರೆಯವರಿಗೆ ವರ್ಗಾವಣೆಮಾಡಿರುವ ಅಧಿಕಾರಿಗಳ ವಿರುದ್ದ ತಕ್ಷಣವೇ ಶಿಸ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಂತರ ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ, ತಾ.ಪಂ.ಸಹಾಯಕ ನಿರ್ದೇಶಕ ರಾಜೇಶ್ ರವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾದ್ಯಕ್ಷ ಕಾಂತರಾಜ್, ಪಿರಿಯಾಪಟ್ಟಣ ತಾಲ್ಲೂಕು ಉಸ್ತುವಾರಿ ರಾಮಣ್ಣಯ್ಯ, ತಾ.ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ, ಉಪಾಧ್ಯಕ್ಷೆ ಸುನೀತಾ, ಕಾರ್ಯದರ್ಶಿಹನುಮಂತ, ಹೋಬಳಿ ಅದ್ಯಕ್ಷ ಬೊಗಯ್ಯ, ಸದಸ್ಯರಾದ ಸರೋಜಮ್ಮ. ತಾಯಮ್ಮ, ಶಶಿಕುಮಾರ್ ಸೇರಿದಂತೆ ಹಲವಾರು ಮಂದಿ ಭಾಗಿಯಾಗಿದ್ದರು.