ನಾಪೋಕ್ಲು ಬೇತು ಗ್ರಾಮದಲ್ಲಿ ನಿವೃತ ಸೈನಿಕನ ಮನೆಗೆ ಕನ್ನ ಹಾಕಿದ ಚೋರರು -ಕೋವಿ,ಬೆಳ್ಳಿಯಪೀಚೆಕತ್ತಿ ಕದ್ದು ಪರಾರಿ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬೇತು ಗ್ರಾಮದಲ್ಲಿ ನಿವೃತ ಸೈನಿಕರೊಬ್ಬರ ಮನೆಯ ಬೀಗ ಹೊಡೆದು ಕನ್ನ ಹಾಕಿದ ಚೋರರು ಮನೆಯೊಳಗಿದ್ದ ಕೋವಿ,ಬೆಳ್ಳಿಯ ಪೀಚೆಕತ್ತಿ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ನಾಪೋಕ್ಲು ಬೇತು ಗ್ರಾಮದ ನಿವೃತ್ತ ಸೈನಿಕ ಕೊಂಡಿರ ನಂದ ಎಂಬುವವರು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆಂದು ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ವಾಸವಿಲ್ಲದಿರುವುದನ್ನು ಬಳಸಿಕೊಂಡ ಕಳ್ಳರು ಮನೆಯ ಬೀಗ ಹೊಡೆದು ಒಳ ನುಗ್ಗಿ, ಮನೆಯ ಕೋಣೆಯೊಳಗಿದ್ದ ಬೀರುಗಳನ್ನು ಹೊಡೆದು ಸುಮಾರು 40 ಸಾವಿರಕ್ಕೂ ಅಧಿಕ ಮೌಲ್ಯದ ಬೆಳ್ಳಿಯ ಪೀಚೆ ಕತ್ತಿ,ಸಿಂಗಲ್ ಬ್ಯಾರಲ್ ಕೋವಿ ಹಾಗೂ ಗ್ಯಾಸ್ ಸಿಲಿಂಡರ್ ಕದ್ದು ಪರಾರಿಯಾಗಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಇದೇ ಗ್ರಾಮದಲ್ಲಿರುವ ಶ್ರೀ ಮಕ್ಕಿ ಶಾಸ್ತಾವು ದೇವಾಲಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲೆಯಲ್ಲೇ ಸಂಚಲನ ಸೃಷ್ಟಿಸಿದ್ದ ದೇವಾಲಯಗಳ ಗಂಟೆ ಕಳ್ಳತನ ಪ್ರಕರಣ ಕೂಡ ನಡೆದಿತ್ತು. ಇದೇ ದೇವಾಲಯದ ಪಕ್ಕದಲ್ಲೇ ನಿವೃತ ಸೈನಿಕ ನಂದ ಅವರ ಮನೆ ಕಳ್ಳತನ ಕೂಡ ನಡೆದಿದ್ದು ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸರು,ಶ್ವಾನದಳ ಹಾಗೂ ಬೆರಳಚ್ಚುತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಭಂದ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.