ಏಲಿಯನ್ಸ್ ಇರುವಿಕೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ, ಅವುಗಳ ಅಸ್ತಿತ್ವದ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟತೆ ದೊರೆತಿಲ್ಲ. ಏಲಿಯನ್ಗಳು ಕಾಣಿಸಿಕೊಳ್ಳುವ ಬಗ್ಗೆ ಆಗಾಗ ಸುದ್ದಿಯಾದರೂ ಕೂಡ ಜನರಲ್ಲಿ ಅವುಗಳ ಅಸ್ತಿತ್ವದ ಪ್ರಶ್ನೆ ಆಗೇ ಉಳಿದಿದೆ. ಸಾಕಷ್ಟು ಸಂಶೋಧನೆಗಳು, ಸಿದ್ಧಾಂತಗಳು ಹೊರಬಂದರೂ ಕೂಡ ಏಲಿಯನ್ಗಳ ಸಂಗತಿ ನಿಗೂಢವಾಗಿಯೇ ನಮ್ಮ ನಡುವೆ ಉಳಿದಿದೆ.
ಆದರೂ ಏಲಿಯನ್ ಮತ್ತು ಹಾರುವ ತಟ್ಟೆಗಳನ್ನು ಕಂಡಿರುವುದಾಗಿ ಕೆಲವರು ವಾದಿಸುತ್ತಾರೆ. ಇನ್ನು ಕೆಲವರು ಇವುಗಳ ಇರುವಿಕೆ ಸುಳ್ಳು ಎನ್ನುತ್ತಾರೆ. ಆಗಾಗ ಭೂಮಿ ಹಾಗೂ ಆಕಾಶದ ಮೇಲೆ ಕೆಲವು ವಿಚಿತ್ರ ವಸ್ತುಗಳು ಕಾಣಿಸಿಕೊಂಡಿವೆ. ಇವುಗಳನ್ನು ಯುಎಫ್ಒ (ಯೂನಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್) ಎಂದು ಕರೆಯಲಾಗುತ್ತದೆ. ಈ ಯುಎಫ್ಒಗಳು ಅನ್ಯಗ್ರಹ ಜೀವಿಗಳ ವಾಹನ ಎಂದೂ ಹೇಳಲಾಗುತ್ತದೆ. ಇವುಗಳನ್ನು ಕಂಡಿದ್ದಾಗಿ ಆಗಾಗ ಕೆಲವರು ಹೇಳುತ್ತಿರುತ್ತಾರೆ. ಆದರೆ, ಅದಕ್ಕೆ ನಿರ್ಣಾಯಕ ಪುರಾವೆಗಳನ್ನು ಒದಗಿಸಲು ಯಾರಿಗೂ ಸಾಧ್ಯವಾಗುತ್ತಿಲ್ಲ.
ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ (JWST) ಬಳಸಿಕೊಂಡು ಇತರ ಗ್ರಹಗಳಲ್ಲಿ ಜೀವಿಗಳಿರುವ ಪುರಾವೆಗಳನ್ನು ಹುಡುಕಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. JWST ಎಂಬುದು ನಾಸಾ, ಇಎಸ್ಎ (ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ) ಮತ್ತು ಸಿಎಸ್ಎ (ಕೆನಡಿಯನ್ ಬಾಹ್ಯಾಕಾಶ ಸಂಸ್ಥೆ) ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಬಾಹ್ಯಾಕಾಶ ದೂರದರ್ಶಕವಾಗಿದೆ.
ಭಾರತೀಯ ಮೂಲದ ವಿಜ್ಞಾನಿ ಡಾ. ನಿಕ್ಕು ಮಧುಸೂಧನ್ ನೇತೃತ್ವದ ಕೇಂಬ್ರಿಡ್ಜ್ ವಿಜ್ಞಾನಿಗಳ ತಂಡವು ಇತ್ತೀಚೆಗೆ ಕೆಲವು ಪ್ರಮುಖ ಸಂಗತಿಗಳನ್ನು ಕಂಡುಹಿಡಿದಿದೆ. K2-18b ಎಂಬ ಗ್ರಹವು ಸೌರ ಮಂಡಲದ ಆಚೆಗೆ ಬೇರೆ ನಕ್ಷತ್ರದ ಸುತ್ತ ಸುತ್ತುತ್ತದೆ. ಈ ಗ್ರಹವು ಜೀವಕ್ಕೆ ನೆಲೆಯಾಗಿರಬಹುದು ಎಂಬುದಕ್ಕೆ ಸಂಶೋಧಕರು ಇತ್ತೀಚೆಗೆ ಪುರಾವೆಗಳನ್ನು ಕಂಡುಕೊಂಡಿದ್ದಾರೆ.
ಈ ಗ್ರಹದ ವಾತಾವರಣದಲ್ಲಿ ಡೈಮೀಥೈಲ್ ಸಲ್ಫೈಡ್ (DMS) ಮತ್ತು ಡೈಮೀಥೈಲ್ ಡೈಸಲ್ಫೈಡ್ (DMDS) ಎಂದು ಕರೆಯಲ್ಪಡುವ ಅನಿಲಗಳು ಇರುವುದು ಕಂಡುಬಂದಿದ್ದು, ಇವು ಜೀವಿಗಳಿಗೆ ಸಂಬಂಧಿಸಿವೆ. ಇವು ಪ್ರಾಥಮಿಕವಾಗಿ ಭೂಮಿಯ ಮೇಲಿನ ಸಮುದ್ರ ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಉತ್ಪತ್ತಿಯಾಗುತ್ತವೆ. ಹೀಗಾಗಿ ಈ ಗ್ರಹದಲ್ಲಿ ಜೀವದ ಚಿಹ್ನೆಗಳು ದೊಡ್ಡ ಪ್ರಮಾಣದಲ್ಲಿ ಇರುವುದು ಆಶ್ಚರ್ಯಕರವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದರ ಬಗ್ಗೆ ಹೆಚ್ಚಿನ ಸ್ಪಷ್ಟ ಮಾಹಿತಿಯ ಅಗತ್ಯವಿದೆ. ಈ ಗ್ರಹದಲ್ಲಿ ಜೀವ ಇರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ ಮತ್ತು ಅದು ಶೀಘ್ರದಲ್ಲೇ ದೃಢೀಕರಿಸಲ್ಪಡುತ್ತದೆ ಎಂದು ಮಧುಸೂದನ್ ವಿಶ್ವಾಸ ಹೊಂದಿದ್ದಾರೆ. K2-18b ಎಂಬ ಈ ಗ್ರಹವು ನಮ್ಮ ಭೂಮಿಗಿಂತ ಎರಡೂವರೆ ಪಟ್ಟು ದೊಡ್ಡದಾಗಿದೆ. ಈ ಗ್ರಹವು ಭೂಮಿಯಿಂದ ಸುಮಾರು 700 ಟ್ರಿಲಿಯನ್ ಮೈಲುಗಳಷ್ಟು ದೂರದಲ್ಲಿದೆ. ಅಂದರೆ ಈ ಗ್ರಹವು ಸುಮಾರು 120 ಜ್ಯೋತಿರ್ ವರ್ಷಗಳ ದೂರದಲ್ಲಿದೆ ಎಂದು ಮಧುಸೂದನ್ ಅವರು ತಿಳಿಸಿದ್ದಾರೆ.
ಮಧುಸೂಧನ್ ನೇತೃತ್ವದ ಕೇಂಬ್ರಿಡ್ಜ್ ತಂಡವು K2-18b ಗ್ರಹದಲ್ಲಿ ಜೀವದ ಸಾಧ್ಯತೆಯನ್ನು ಗುರುತಿಸಿದ್ದರೂ, ಅವರ ಸಂಶೋಧನೆಗಳನ್ನು ಸಂಪೂರ್ಣವಾಗಿ ದೃಢೀಕರಿಸಲು ಸಾಧ್ಯವಿಲ್ಲ ಎಂದು ಸ್ವತಃ ಅವರೇ ಹೇಳುತ್ತಾರೆ. ಹೊಸದಾಗಿ ಪತ್ತೆಯಾದ ಪುರಾವೆಗಳನ್ನು “ಆವಿಷ್ಕಾರ” ಎಂದು ಪರಿಗಣಿಸಲು, ಫಲಿತಾಂಶಗಳು 99.99% ಕ್ಕಿಂತ ಹೆಚ್ಚು ನಿಖರವಾಗಿರಬೇಕು. ಸದ್ಯ ಮಧುಸೂಧನ್ ನೇತೃತ್ವದ ಕೇಂಬ್ರಿಡ್ಜ್ ತಂಡವು ಗುರುತಿಸಿದ ಫಲಿತಾಂಶಗಳು 99.7% ನಿಖರವಾಗಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.
ಡಾ. ಮಧುಸೂಧನ್ 1980ರಲ್ಲಿ ಭಾರತದಲ್ಲಿ ಜನಿಸಿದರು. ಅವರು ವಾರಣಾಸಿಯಲ್ಲಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಳಿಕ ಬ್ಯಾಚುಲರ್ ಆಫ್ ಟೆಕ್ನಾಲಜಿ ಪದವಿಯನ್ನು ಪಡೆದರು. ನಂತರ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದರು. ಅಲ್ಲಿ ಅವರು ಗ್ರಹ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವಿಯನ್ನು ಪೂರ್ಣಗೊಳಿಸಿ, ಎಕ್ಸ್‌ಪ್ಲೋನೆಟ್ ಸಂಶೋಧನೆಯಲ್ಲಿ ಡಾ. ಸಾರಾ ಸೀಸರ್ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು. ಮಧುಸೂಧನ್ ಪ್ರಸ್ತುತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಸೌರವ್ಯೂಹದ ಹೊರಗಿನ ಗ್ರಹಗಳ ಮೇಲಿನ ವಾತಾವರಣ ಮತ್ತು ಜೀವನದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. “ಹೈಸಿಯನ್ ಗ್ರಹಗಳು” ಎಂಬ ಪರಿಕಲ್ಪನೆಯನ್ನು ಪರಿಚಯಿಸಿದ್ದಕ್ಕಾಗಿ ಅವರು ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ.