ಮಂಗಳೂರು: ನಿನ್ನೆ ರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಲ್ಕಿ ನಿವಾಸಿ ಪ್ರಭುರಾಜ್ (38), ಕುಂಪಲ ನಿವಾಸಿ ಮಿಥುನ್ (30) ಮತ್ತು ಮಣಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.
ಈ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಲ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, “ನಿನ್ನೆ ಮಧ್ಯರಾತ್ರಿ ಸುಮಾರು 1.30ರ ವೇಳೆಗೆ 112ಗೆ ಕರೆ ಬಂದಿತ್ತು. ಕರೆ ಮಾಡಿದವರು ಹುಡುಗಿಯೊಬ್ಬಳು ಕೂಗಾಡುತ್ತಿದ್ದು, ಆಕೆಗೆ ಹಲ್ಲೆ ಮಾಡಲಾಗಿದೆ ಎಂದು ತಿಳಿಸಿದ್ದರು. ತಕ್ಷಣವೇ ಹೊಯ್ಸಳ ವಾಹನವು ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಪೊಲೀಸ್ ಠಾಣೆಗೆ ಕರೆತಂದಿದೆ. ಆಕೆ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು” ಎಂದು ಹೇಳಿದರು.
ಬೆಳಿಗ್ಗೆ ಯುವತಿ ನೀಡಿದ ಹೇಳಿಕೆಯ ಪ್ರಕಾರ, ನಿನ್ನೆ ರಾತ್ರಿ ಯಾರೋ ಆಕೆಗೆ ಮದ್ಯಪಾನ ಮಾಡಿಸಿದ್ದಾರೆ. ನಂತರ ಆಕೆ ಪ್ರಜ್ಞೆ ತಪ್ಪಿದ್ದು, ಕಾರಿನಲ್ಲಿ ಮೂರು ಜನರು ಇದ್ದರು ಎಂದು ತಿಳಿಸಿದ್ದಾಳೆ. ಪ್ರಜ್ಞೆ ಬಂದ ನಂತರ ಆಕೆಯ ಒಳಉಡುಪುಗಳು ಇರಲಿಲ್ಲ ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಪ್ರಜ್ಞೆ ಬಂದ ನಂತರ ಕೂಗಾಡಲು ಶುರು ಮಾಡಿದಾಗ ಅವರು ಆಕೆಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಆಕೆ ಸ್ಥಳೀಯರ ಸಹಾಯದಿಂದ ಪೊಲೀಸರನ್ನು ಸಂಪರ್ಕಿಸಿದ್ದಾಳೆ ಎಂದು ಕಮಿಷನರ್ ತಿಳಿಸಿದರು.
ಯುವತಿಯ ದೂರಿನ ಆಧಾರದ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿರುವಂತೆ, ಯುವತಿ ನಿನ್ನೆ ಬೆಳಿಗ್ಗೆ ತನ್ನ ಸಹಪಾಠಿಯೊಂದಿಗೆ ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದಳು. ಆಕೆ ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದವಳಾಗಿದ್ದು, ಕಳೆದ 2-3 ವರ್ಷಗಳಿಂದ ಕೇರಳದ ಫ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ ಆಕೆ ತನ್ನ ಗೆಳೆಯನೊಂದಿಗೆ ಇಲ್ಲಿಗೆ ಬಂದಿದ್ದಳು. ಈ ವೇಳೆ ಗೆಳೆಯನೊಂದಿಗೆ ಜಗಳವಾದ ಕಾರಣ ಆತ ಆಕೆಯ ಮೊಬೈಲಿಗೆ ಹಾನಿ ಮಾಡಿದ್ದ. ಹಾಗಾಗಿ ಮೊಬೈಲ್ ರಿಪೇರಿಗಾಗಿ ಆಕೆ ಆಟೋ ಹಿಡಿದು ಅಂಗಡಿಗೆ ತೆರಳಿದ್ದಳು.
ಸುಮಾರು 5-6 ಗಂಟೆಗಳ ಕಾಲ ಆಕೆ ಆಟೋ ಚಾಲಕನೊಂದಿಗೆ ಇದ್ದು, ಆತನೊಂದಿಗೆ ಗೆಳೆತನ ಬೆಳೆಸಿದ್ದಳು. ಮೊಬೈಲ್ ರಿಪೇರಿ ಹಣವನ್ನು ಸಹ ಆಟೋ ಚಾಲಕನೇ ಪಾವತಿಸಿದ್ದ. ಬಳಿಕ ಆಕೆ ರಾತ್ರಿ ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲ್ವೇ ನಿಲ್ದಾಣಕ್ಕೆ ಬಿಡುವಂತೆ ಆಟೋ ಚಾಲಕನಿಗೆ ಹೇಳಿದ್ದಳು. ಆದರೆ ಆಟೋ ಚಾಲಕ ಕಂಕನಾಡಿ ರೈಲ್ವೇ ನಿಲ್ದಾಣಕ್ಕೆ ಹೋಗದೆ ಮತ್ತಿಬ್ಬರು ಗೆಳೆಯರನ್ನು ಕರೆಸಿ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಚೆನ್ನಾಗಿ ಮದ್ಯಪಾನ ಮಾಡಿಸಿ, ಆಕೆ ಪ್ರಜ್ಞೆ ತಪ್ಪಿದ ನಂತರ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಸದ್ಯ ಈ ಪ್ರಕರಣದ ತನಿಖೆ ನಡೆಸಲಾಗಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.