ಹೆಚ್.ಡಿ.ಕೋಟೆ : ವಕೀಲರ ರಕ್ಷಣಾ ಮಸೂದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ, ಹೆಚ್.ಡಿ.ಕೋಟೆಯಲ್ಲಿ ವಕೀಲರು ಪ್ರತಿಭಟನೆ ನಡೆಸಿದರು. ಪಟ್ಟಣದ ನ್ಯಾಯಾಲಯದ ಆವರಣದಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿದ ವಕೀಲರು, ತಾಲ್ಲೂಕು ಆಡಳಿತ ಸೌಧದೆದುರು ಸಮಾವೇಶಗೊಂಡು ಮಸೂದೆ ಜಾರಿಗೆ ಒತ್ತಾಯಿಸಿದರು.
ಈ ಸಂದರ್ಭ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ರವಿಕುಮಾರ್, ಹಾಗೂ ವಕೀಲ ರಾದ ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯ ಪಾಲಕರಾದ ವಕೀಲರ ಮೇಲೆ ಪೊಲೀಸರು ಮತ್ತು ಕೆಲವು ಸಾರ್ವಜನಿಕರಿಂದ ಕೊಲೆ, ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಿದ್ದು, ನ್ಯಾಯಪಾಲಕರಾದ ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಕೊಲೆ, ದೌರ್ಜನ್ಯ, ದಬ್ಬಾಳಿಕೆಗಳ ವಿರುದ್ಧ ವಕೀಲರ ಸಮೂಹವು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಸಹ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರಲ್ಲದೇ, ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಇರುವಂತೆ ವಕೀಲರ ರಕ್ಷಣಾ ಮಸೂದೆಯು ಜಾರಿಗೆ ತರುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಬಳಿಕ ತಹಸೀಲ್ದಾರ್ ಸಣ್ಣರಾಮಪ್ಪ ಅವರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ದಿನೇಶ್, ಉಪಾಧ್ಯಕ್ಷ ನಾಗೇಶ್, ಖಜಾಂಚಿ ಚಲುವಪ್ಪ, ವಕೀಲರಾದ ಕೆ.ಜಿ.ಹಳ್ಳಿ ಸಿದ್ದಪ್ಪಾಜಿ, ಚೌಡಹಳ್ಳಿ ಜವರಯ್ಯ, ಶ್ರೀನಿವಾಸ, ಕೃಷ್ಣಯ್ಯ, ಹನುಮೇಶ್, ಜೆ.ಸಿ ಕುಮಾರ್, ದೊರೆಸ್ವಾಮಿ, ಕೆ.ಸಿ. ಚಂದ್ರಶೇಖರ್, ಮೋಹನ್, ರಾಮನಾಯಕ, ವೆಂಕಟೇಶ್, ಸರಸ್ವತಿ, ಶಾಂತ, ನಯನ, ರೋಜ, ವೇದ ಸೇರಿದಂತೆ ಮತ್ತೀತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.