ಮಡಿಕೇರಿ: ಶ್ರೀಗಂಧ ಮರದ ತುಂಡುಗಳನ್ನು ಕಳವುಗೈಯಲು ಯತ್ನಿಸಿದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದು, ಕುಶಾಲನಗರ ಬಳಿಯ ರಂಗಸಮುದ್ರದ ನಿವಾಸಿ ಪ್ರಸಾದ್ ಪಿ.ಆರ್. ಬಂಧಿತ ಆರೋಪಿಯಾಗಿದ್ದಾನೆ.
ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮದ ಖಾಸಗಿ ಜಾಗದಲ್ಲಿ ಶನಿವಾರ ರಾತ್ರಿ ಅಕ್ರಮವಾಗಿ ಶ್ರೀಗಂಧದ ಮರವನ್ನು ಬುಡದಿಂದ ಕಡಿದು ಕಳವುಗೈಯಲು ಯತ್ನಿಸಿದ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ ಹಾಗೂ ಮಡಿಕೇರಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಬಾಷ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಉಪವಲಯ ಅರಣ್ಯಾಧಿಕಾರಿ ಬಾಬು ರಾಥೋಡ್, ಸಚಿನ್ ಹಾಗೂ ಅರಣ್ಯ ರಕ್ಷಕರಾದ ಸಂದೇಶ್ ಯು.ಆರ್., ಯತೀಶ್ ಸಿ.ಸಿ, ವಾಸುದೇವ ಯು.ಸಿ. ಹಾಗೂ ಸಿಬ್ಬಂದಿಗಳಾದ ಅಜಿತ್, ಮೋಹನ್, ಮಹೇಶ್,ಅನಿಲ್, ನವೀನ್ ಶ್ರೀಗಂಧದ ಮರದ ತುಂಡುಗಳನ್ನು ವಶಪಡಿಸಿಕೊಂಡು ಆರೋಪಿ ಕುಶಾಲನಗರ ಬಳಿಯ ರಂಗಸಮುದ್ರ ನಿವಾಸಿ ಪ್ರಸಾದ್ ಪಿ.ಆರ್. ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗವಶಕ್ಕೆ ಒಪ್ಪಿಸಲಾಗಿದೆ.