ಶನಿವಾರಸಂತೆ : ‘ಜನ ಜಾಗೃತಿಯಿಂದ ಸಾಕುನಾಯಿ, ಬೆಕ್ಕು ಸೇರಿದಂತೆ ಸಾಕುಪ್ರಾಣಿಗಳಿಗೆ ಬರುವ ರೇಬಿಸ್ ಖಾಯಿಲೆಯನ್ನು ನಿಯಂತ್ರಣಗೊಳಿಸಲು ಸಾಧ್ಯವಾಗುತ್ತದೆ’ ಎಂದು ಸೋಮವಾರಪೇಟೆ ತಾಲೋಕು ಪಶು ವೈದ್ಯ ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎಸ್.ವಿ.ಬದಾಮಿ ಹೇಳಿದರು. ಶನಿವಾರಸಂತೆ ರೋಟರಿ ಕ್ಲಬ್, ಪಶು ಸಂಗೋಪನೆ ಇಲಾಖೆ ಮತ್ತು ಹಂಡ್ಲಿ ಗ್ರಾ.ಪಂ.ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಮ್ಮಿಕೊಂಡಿದ್ದ 6ನೇ ವರ್ಷದ ಸಾಕುನಾಯಿ ಹಾಗೂ ಬೆಕ್ಕುಗಳಿಗೆ ರೇಬಿಸ್[ನಾಯಿ ಹುಚ್ಚು] ನಿಯಂತ್ರಣ ಲಸಿಕಾ ಶಿಬಿರದಲ್ಲಿ ಮಾಹಿತಿ ನೀಡಿದರು.
ರೇಬಿಸ್ ಎಂಬ ವೈರಸ್ ಮೊದಲು ಕಾಡು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುತ್ತದೆ, ನರಿ, ತೋಳ, ಬಾವಲಿ ಮುಂತಾದ ಕಾಡುಪ್ರಾಣಿಗಳು ಸಾಕುನಾಯಿ ಬೆಕ್ಕುಗಳಿಗೆ ಕಡಿದ ಸಂದರ್ಭದಲ್ಲಿ ರೇಬಿಸ್ ವೈರಸ್ ಸಾಕು ಪ್ರಾಣಿಗಳಿಗೆ ಹರಡುತ್ತದೆ ರೇಬಿಸ್ ಭಯಾನಕ ಖಾಯಿಲೆಯಾಗಿದ್ದರೂ ಮುಂಜಾಗೃತೆಯಾಗಿ ಪ್ರತಿಯೊಬ್ಬರು ಸಾಕುನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದರಿಂದ ರೇಬಿಸ್ ಕಾಯಿಲೆಯನ್ನು ನಿಯಂತ್ರಣಗೊಳಿಸಬಹುದು ಎಂದರು. ಮನುಷ್ಯ ಮತ್ತು ಪ್ರಾಣಿಗಳಿಗೆ ಭಯಾನಕ ಖಾಯಿಲೆಗಳು ಬರುತ್ತದೆ ಆದರೆ ಜನ ಜಾಗೃತಿಯಿಂದ ಇಂಥಹ ಕಾಯಿಲೆಗಳ ನಿಯಂತ್ರಣಕ್ಕೆ ಪರಿಹಾರ ಇರುತ್ತದೆ ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಸಾಕುನಾಯಿಗಳಿಗೆ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನಿಯವಾದದ್ದು ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ಜಯಕುಮಾರ್ ಮಾತನಾಡಿ-ರೇಬಿಸ್ ಖಾಯಿಲೆ ಬಗ್ಗೆ ಶ್ವಾನ ಪ್ರೀಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯು ಕಳೆದ 5 ವರ್ಷಗಳಿಂದ ಉಚಿತ ರೇಬಿಸ್ ನಿಯಂತ್ರಣ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳುತ್ತಿದೆ ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಸೇವೆ ದೊಡ್ಡದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಶು ವೈಧ್ಯ ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗರಾಜ್, ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ.ಸತೀಶ್, ರೋಟರಿ ಕ್ಲಬ್ ವಲಯ ಸೇನಾನಿ ಎಚ್.ವಿ.ದಿವಾಕರ್, ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ.ಮೋಹನ್‌ಕುಮಾರ್ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ಶಿಬಿರದಲ್ಲಿ ನೂರಾರು ಶ್ವಾನಗಳಿಗೆ ಉಚಿತ ರೇಬಿಸ್ ನಿಯಂತ್ರಣ ಲಸಿಕೆ ಹಾಕಲಾಯಿತು.