ಮರಗೋಡು : ಮರಗೋಡುವಿನ ಭಾರತಿ ಹೈಸ್ಕೂಲ್ ಮೈದಾನದಲ್ಲಿ ಕಳೆದೆರಡು ದಿನಗಳಿಂದ ನಡೆದ ಅಂತರ್ ಗ್ರಾಮ ಕ್ರೀಡಾ ಕೂಟದಲ್ಲಿ ಕಟ್ಟೆಮಾಡು ಗ್ರಾಮ ಸಮಗ್ರ ಚಾಂಪಿಯನ್ ಆಗಿಹೊರ ಹೊಮ್ಮಿದೆ. ಒಟ್ಟಾರೆ 281 ಪಾಯಿಂಟ್ ಕಲೆ ಹಾಕಿದ ಕಟ್ಟೆಮಾಡು ಗ್ರಾಮ ಅಗ್ರಸ್ಥಾನಿಯಾದರೆ ಕೇವಲ ಮೂರು ಪಾಯಿಂಟ್ ಗಳಿಂದ ಹಿಂದುಳಿದ ಹೊಸ್ಕೇರಿ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 232 ಅಂಕ ಪಡೆದ ಮರಗೋಡು ತಂಡ ಮೂರನೇ ಸ್ಥಾನ ಪಡೆದರೆ, ಅರೆಕಾಡು ಮತ್ತು ಐಕೋಳ ತಂಡಗಳು ಕ್ರಮವಾಗಿ ನಾಲ್ಕನೇ ಹಾಗು ಐದನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡವು.
ಪುರುಷರ ಕಬ್ಬಡ್ಡಿಯಲ್ಲಿ ಹೊಸ್ಕೇರಿ ತಂಡ ಅರೆಕಾಡು ಗ್ರಾಮವನ್ನ ಮಣಿಸಿ ಚಾಂಪಿಯನ್ ಆಗಿ ಹೊಹೊಮ್ಮಿತು. ಮಹಿಳಾ ಕಬ್ಬಡ್ಡಿಯಲ್ಲಿ ಮರಗೋಡು ತಂಡವನ್ನ ಮಣಿಸಿದ ಕಟ್ಟೆಮಾಡು ಗ್ರಾಮ ಪ್ರಶಸ್ತಿಗೆ ಮುತ್ತಿಕ್ಕಿತು. ವಾಲಿಬಾಲ್ ಸ್ಪರ್ಧೆಯಲ್ಲಿ ಅರೆಕಾಡು ಪ್ರಥಮ ಸ್ಥಾನ ಪಡೆದರೆ ಹೊಸ್ಕೇರಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಮಹಿಳೆಯರ ಥ್ರೋಬಾಲ್ ನಲ್ಲಿ ಕಟ್ಟೆಮಾಡು ತಂಡ ಮರಗೋಡು ತಂಡವನ್ನ ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಫುಟ್ಬಾಲ್ ನಲ್ಲಿ ಹೊಸ್ಕೇರಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಕಟ್ಟೆಮಾಡು ತಂಡದ ವಿರುದ್ಧ ಜಯಭೇರಿ ಬಾರಿಸಿತು. ಪುರುಷರ ರೋಚಕ ಹಗ್ಗಜಗ್ಗಾಟದಲ್ಲಿ ಬಲಿಷ್ಟ ಮರಗೋಡು ತಂಡ ಹೊಸ್ಕೇರಿ ಗ್ರಾಮವನ್ನ ಸುಲಭವಾಗಿ ಮಣಿಸಿತು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಹೊಸ್ಕೇರಿ ತಂಡ ಮರಗೋಡು ವಿರುದ್ಧ ಜಯದ ನಗೆ ಬೀರಿತು. ಹೊಸ್ಕೇರಿ ಗ್ರಾಮದ ರಾಷ್ಟ್ರೀಯ ಅಥ್ಲೀಟ್ ಎಂಸಿ ಮಿಲನ್ ಬೆಸ್ಟ್ ಮೇಲ್ ಅಥ್ಲೀಟ್ ಆಗಿ ಹೊರ ಹೊಮ್ಮಿದರೆ, ಅತ್ಯುತ್ತಮ ಮಹಿಳಾ ಅಥ್ಲೀಟ್ ಆಗಿ ಕಟ್ಟೆಮನೆ ದಿಯಾ ಪ್ರಶಸ್ತಿ ಪಡೆದರು.
12 ವರ್ಷದ ಬಾಲಕಿ ಕಟ್ಟೆಮನೆ ಪ್ರಕೃತಿ ದೂರ ಓಟದಲ್ಲಿ ಎಲ್ಲಾ ಹಿರಿಯ ಓಟಗಾರ್ತಿಯರನ್ನ ಹಿಂದಿಕ್ಕಿ ತಾವು ಭವಿಷ್ಯದಲ್ಲಿ ಅತ್ಯುತ್ತಮ ಅಥ್ಲೀಟ್ ಆಗುವ ಭರವಸೆ ಮೂಡಿಸಿದರು.
ದಿನಿವಿಡೀ ವಿವಿಧ ವಯೋಮಾನದವರಿಗೆ ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ನಡೆದವು. ಕ್ರೀಡಾಕೂಟದ ಅಂಗವಾಗಿ ಮಂಗಳೂರಿನ ಹುಲಿ ಕುಣಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಬಣ್ಣಬಣ್ಣದ ಹುಲಿಗಳು ವೈವಿಧ್ಯಮಯ ಸಾಹಸ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದವು. ಬಳಿಕ ಕೊಡಗಿನ ವಾಲಗಕ್ಕೆ ಮಂಗಳೂರಿನ ಹುಲಿಗಳು ಹೆಜ್ಜೆ ಹಾಕಿ ಗಮನ ಸೆಳೆದವು.