ವಿಶೇಷ ವರದಿ : ಅನಿಲ್ ಎಚ್.ಟಿ.
ಪುನೀತ್ ರಾಜ್ ಕುಮಾರ್ ನಿರ್ಮಾಣ ಮತ್ತು ನಟನೆಯ ಕೊನೇ ಚಿತ್ರವಾಗಿರುವ ಗಂಧದ ಗುಡಿ ಎಂಬ ಕನ್ನಡ ನಾಡಿನ ಸಾಕ್ಷ್ಯಚಿತ್ರ ನಿಸರ್ಗ ಪ್ರಿಯರನ್ನು ಮೋಡಿ ಮಾಡುತ್ತಿದೆ.
ಡಾ.ರಾಜ್ ಕುಮಾರ್ - ವಿಷ್ಮುವರ್ಧನ್ ಅಭಿನಯಿಸಿದ್ದ 49 ವರ್ಷಗಳ ಹಿಂದೆ ತೆರೆಕಂಡು ಇಂದಿಗೂ ಜನಮಾನಸದಲ್ಲಿ ಮಾಸದೇ ಇರುವ ಗಂಧದ ಗುಡಿ ಅನಂತರ ಡಾ.ಶಿವರಾಜ್ ಕುಮಾರ್ ನಟಿಸಿದ್ದ ಗಂಧದ ಗುಡಿ-2ನ್ನು ಸ್ಮರಿಸಿಕೊಂಡು ಹೇಳುವುದಾದರೇ ಪುನೀತ್ ನಟನೆಯ ಗಂಧದ ಗುಡಿ ನಿಜಕ್ಕೂ ಕರುನಾಡಿನ ನಿಸರ್ಗ ಸಿರಿವಂತಿಕೆಯನ್ನು ಹಿರಿತೆರೆಯಲ್ಲಿ ತೋರಿಸಿದ ಹಿರಿಮೆಗೆ ಪಾತ್ರವಾಗಿದೆ.
ಕನ್ನಡನಾಡಿನಲ್ಲಿ ಇಷ್ಟೊಂದು ಸುಂದರ ಮತ್ತು ಅದ್ಬುತ ತಾಣಗಳಿವೆಯೇನೋ ಎಂದು ವೀಕ್ಷಕ ಅಚ್ಚರಿಗೊಳ್ಳುವಷ್ಟು ಚಂದವಾಗಿ ಗಂಧದ ಗುಡಿ ಮೂಡಿಬಂದಿದೆ.
ಪುನೀತ್ ಎಂಬ ಪವರ್ ಸ್ಟಾರ್ ಗಂಧದ ಗುಡಿಯಲ್ಲಿ ಯಾವುದೇ ಸ್ಟಾರ್ ಗಿರಿಯಿಲ್ಲದೇ ಪುನೀತ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ಸಹಜತೆಯಿಂದ ತಾವು ತಾವಾಗಿಯೇ ಪುನೀತ್ ಇದ್ದಾರೆ. ಇಲ್ಲಿ ಪುನೀತ್ ಖಂಡಿತಾ ನಟಿಸಿದಂತಿಲ್ಲ. ಸಹಜವಾಗಿಯೇ ಪುನೀತ್ ಕ್ಯಾಮರ ಮುಂದೆ ಮಾತನಾಡಿದ್ದಾರೆ. ಭಾವನೆಗಳನ್ನು ಸಹಜ ಕುತೂಹಲದೊಂದಿಗೆ ವ್ಯಕ್ತಪಡಿಸಿದ್ದಾರೆ.
ಗಂಧಧ ಗುಡಿ ಸಿನಿಮಾವಲ್ಲ. ಕರುನಾಡಿನ ಅಪೂರ್ವತೆಯನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರವಿದು. ಹೀಗಾಗಿ ಹಿರೋಯಿನ್ ಇಲ್ಲ, ಫಾರಿನ್ ಲೋಕೇಶನ್ ಗಳಿಲ್ಲ. ಪಾತ್ರಗಳು ಹೆಚ್ಚಿಲ್ಲ. ಇಲ್ಲಿ ನಿಸರ್ಗವೇ ಹಿರೋ. ನೀರಿನಾಳದ ರಮಣೀಯತೆಯೇ ಹಿರೋಯಿನ್,
ಕೇವಲ ಒಂದೂವರೆ ಗಂಟೆಗಳ ಗಂಧದ ಗುಡಿಯಲ್ಲಿ ಕಾಳಿ ನದಿಯ ಸೊಬಗಿನೊಂದಿಗೆ ವೀರಪ್ಪನ್ ಓಡಾಡಿದ್ದ ರಾಜ್ ಕಿಡ್ ನ್ಯಾಪ್ ಆಗಿದ್ದ ಮಲೆಮಹದೇಶ್ವರ ವ್ಯಾಪ್ತಿಯ ಕಾಡು, ಗಾಡನೂರು ಚಿತ್ರಣ ಕೂಡ ಇದೆ. ಕರ್ನಾಟಕದ ಸೊಲಿಗರು, ಜಾನಪದೀಯರು ತಮ್ಮ ಸಂಸ್ಕೃತಿ ಮೆರೆಯುವ ದೖಶ್ಯಗಳಿದೆ.
ಪುನೀತ್ ಮುಗ್ದನಂತೆ, ಮಗುವಿನಂತೆ, ಸಂತನಂತೆ, ಸಂಚಾರಿಯಂತೆ, ಅರಣ್ಯ ರಕ್ಷಕನಂತೆ ಅನೇಕ ಕಡೆ ಕಂಗೊಳಿಸಿದ್ದಾರೆ.
ಕರ್ನಾಟಕದ ನಿಸರ್ಗ ವೈಭವವನ್ನು ಗಂಧದ ಗುಡಿಯಂಥ ಚಿತ್ರದ ಮೂಲಕ ತೋರಿಸಬೇಕೆಂಬ ಪುನೀತ್ ಅಭಿಲಾಶೆಗೆ ವನ್ಯಜೀವಿ ಛಾಯಾಗ್ರಾಹಕ ಅಮೋಘವರ್ಷ ಉತ್ತಮ ಸಮನ್ವಯ ನೀಡಿದ್ದಾರೆ. ಎಲ್ಲಿಯೂ ಸಿನಿಮಾ ಡೈಲಾಗ್ ಗಳಂತೆ ಇವರೀರ್ವರ ಸಂಭಾಷಣೆ ಕೇಳಿಬರುವುದಿಲ್ಲ. ಗೆಳೆಯರಿಬ್ಬರು ಸಹಜವಾಗಿ ಮಾತನಾಡಿದಂತೆ ಇಬ್ಬರೂ ಮಾತನಾಡಿದ್ದಾರೆ. ಪುನೀತ್ ಪ್ರಶ್ನೆಗಳು ಪ್ರೇಕ್ಷಕರ ಪ್ರಶ್ನೆಗಳಾಗಿಯೂ ಭಾಸವಾಗುತ್ತದೆ. ಅಲ್ಲಲ್ಲಿ ಇಂಗ್ಲೀಷ್ ಡೈಲಾಗ್ ಗಳು ಕೇಳಿದರೂ ಯಾವುದೂ ಕಿರಿಕಿರಿಯಾಗುವುದಿಲ್ಲ. ನಮ್ಮ ಪಕ್ಕದಲ್ಲಿಯೇ ಕುಳಿತು ಮಾತನಾಡುತ್ತಿದ್ದಾರೇನೋ ಎಂಬ ಸಹಜ ಭಾವವಿದು.
ದ್ರೋಣ್ ಕ್ಯಾಮರದಂಥ ತಂತ್ರಜ್ಞಾನ ಬಂದ ಮೇಲೆ ನಮ್ಮ ಎದುರಿನ ದೖಶ್ಯಗಳ ವೈಭವ ಮತ್ತಷ್ಟು ಹೆಚ್ಚಾಗಿದೆ. ಕಾಡನ್ನು ಅದರ ಮೇಲ್ಬದಿಯಿಂದ ತೋರಿಸಿದಾಗ ನೋಡುಗನಿಗೆ ಉಂಟಾಗುವ ರೋಮಾಂಚನವೇ ಬೇರೆ. ಕಡಲಾಳಕ್ಕೂ ವಿಶೇಷ ಕ್ಯಾಮರ ತೂರಿ ಅಲ್ಲಿನ ಸೌಂದರ್ಯವನ್ನೂ ತೋರಿಸಿದ್ದಾರೆ.
ಸಾಮಾನ್ಯವಾಗಿ ಸಾಕ್ಷ್ಯಚಿತ್ರ ಎಂದರೆ ನಿರ್ದೇಶಕ ತನಗೆ ಗೊತ್ತಿರುವುದನ್ನು ಹೇಳುತ್ತಾ ಹೋಗುತ್ತಾನೆ. ಆದರೆ ಗಂಧದ ಗುಡಿಯಲ್ಲಿ ನಿರ್ದೇಶಕ ಅಮೋಘವರ್ಷ ಮತ್ತು ಪುನೀತ್ ಸಂಭಾಷಣೆಯ ಮೂಲಕ ಹೊಸ ಮಾಹಿತಿಯನ್ನು ಕೇಳುತ್ತಾ, ತಿಳಿದುಕೊಳ್ಳುತ್ತಾ ಪ್ರೇಕ್ಷಕನಿಗೆ ಹೊಸ ವಿಚಾರಗಳನ್ನು ಹೊಸ ರೀತಿಯಲ್ಲಿ ತೋರುತ್ತಾ ಸಾಗುತ್ತಾರೆ.
ಹೀಗಾಗಿಯೇ ಗಂಧದ ಗುಡಿಯಲ್ಲಿ ಪುನೀತ್, ಅಮೋಘ ವರ್ಷ ಕಾಡು, ಸಾಗರ, ದ್ವೀಪ, ಬರಡುಭೂಮಿಯಲ್ಲೆಲ್ಲಾ ಸಾಗಿದಂತೆ ಪ್ರೇಕ್ಷಕ ಕೂಡ ಅವರೊಂದಿಗೆ ಸಿನಿ ಯಾನವನ್ನು ಮುಂದುವರೆಸುತ್ತಲೇ ಇರುತ್ತಾನೆ. ಗಂಧದ ಗುಡಿ ಪ್ರಾರಂಭದಲ್ಲಿಯೇ ನೋಡುಗನ ಮನವನ್ನೂ ಆಕ್ರಮಿಸಿಕೊಳ್ಳುತ್ತದೆ. ಹುಲಿ, ಚಿರತೆ, ಮಂಗ, ನವಿಲು, ಕಾಡಾನೆ, ಕಪ್ಪೆ ಹೀಗೆ ವನ್ಯಜೀವಿಗಳನ್ನು ಸಹಜವಾಗಿ ತೋರಿಸುತ್ತಲೇ ಇದು ವನ್ಯಜೀವಿಗಳ ಕುರಿತ ಸಾಕ್ಷ್ಯಚಿತ್ರವಾಗದಂತೆಯೂ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ. ಕಾಡಾನೆ ಓಡಿಸುವ ಪುನೀತ್, ಅರಣ್ಯ ವೀಕ್ಷಕರ ಸಂಕಷ್ಟಗಳನ್ನು ತೋರಿಸುವ ದೖಶ್ಯಗಳು, ಕಾಲೆತ್ತಿ ಹೆಣ್ಣು ಕಪ್ಪೆಯನ್ನು ಆಕರ್ಷಿಸುವ ಗಂಡು ಕಪ್ಪೆ, ಕಡಲಿನಲ್ಲಿ ಕಂಗೊಳಿಸುವ ಏಕೈಕ ದೋಣ, ವಿಜಯನಗರ ಸಾಮ್ರಾಜ್ಯದ ಕರುಹುಗಳಲ್ಲಿ ಕಂಗೊಳಿಸುವ ಸೌಂದರ್ಯ ರಾಶಿ.. ಹೀಗೆ ಪ್ರತೀ ದೖಶ್ಯವೂ ವಿನೂತನ, ನಿತ್ಯ ನೂತನದಂತಿದೆ.
ಹಳೇ ಚಿತ್ರಗಳ ತುಣುಕುಗಳೊಂದಿಗೆ ಅಲ್ಲಲ್ಲಿ ಪುನೀತ್ ಬಾಲ್ಯದ ನೆನಪುಗಳೂ ತೆರೆದುಕೊಳ್ಳುವುದು ಕೂಡ ವಿಭಿನ್ನ ಅನುಭವ, ಅನುಭೂತಿ. ಗಾಜನೂರಿನಲ್ಲಿ ಡಾ.ರಾಜ್ ಧ್ಯಾನಸ್ತರಾಗುತ್ತಿದ್ದ ಆಲದ ಮರದಡಿ ಪುನೀತ್ ಭಾವುಕರಾಗಿ ತನ್ನ ತಂದೆ ಕಳೆಯುತ್ತಿದ್ದ ಕ್ಷಣಗಳನ್ನು ನೆನಪಿಸಿಕೊಳ್ಳುವುದು ಕೂಡ ಶ್ಲಾಘನೀಯವಾಗಿದೆ.
ನೇತ್ರಾಣಿಯಲ್ಲಿ ಸ್ಕೂಬಾ ಡ್ರೈವ್ ಮಾಡುವ ಸಾಹಸಕ್ಕಿಳಿಯುವ ಪುನೀತ್ ತನ್ನ ಪವರ್ ಸ್ಟಾರ್ ಗಿರಿಯನ್ನು ತೋರಿದ್ದಾರೆ. ಕಡಲಾಳದ ಅದ್ಪುತ ಜೀವಿಗಳ ದರ್ಶನ ಕಣ್ಣಿಗೆ ರಸದೌತಣ ನೀಡುತ್ತದೆ.
ಹೀಗೆಲ್ಲಾ ಇದ್ದರೂ ಗಂಧದ ಗುಡಿಯಲ್ಲಿ ಅದೆನೋ ಮಿಸ್ ಆಗಿದೆ ಎನ್ನಿಸದೇ ಇರದು. ಬಹುಶ ಪುನೀತ್ ಜೀವಂತವಾಗಿದ್ದಿದ್ದರೆ ಮತ್ತಷ್ಟು ಸೌಂದರ್ಯರಾಶಿಯನ್ನು ಸೆರೆಹಿಡಿಯುವ ಯೋಜನೆ ಇದ್ದಿರಬಹುದು. ಈ ಪೈಕಿ ಕೊಡಗು, ಕಾವೇರಿ, ಮಲೆನಾಡು, ಚಿಕ್ಕಮಗಳೂರು ಸೇರಿದ್ದಿರಬಹುದು. ವಿಧಿಲಿಖಿತ ಎಂಬಂತೆ ಅಕಾಲಿಕವಾಗಿ ಮರೆಯಾದ ಪುನೀತ್ ಜತೆ ಗಂಧದ ಗುಡಿಯ ಮತ್ತಷ್ಟು ಕನಸಿನ ಯೋಜನೆ ಕೂಡ ಕಣ್ಮರೆಯಾಗಿರುವ ಸಾಧ್ಯತೆಯೂ ಇದೆ. ಹೀಗಾಗಿಯೇ ಈ ಮಿಸ್ಸಿಂಗ್ ಲಿಂಕ್ ಬಗ್ಗೆ ಸಂಶಯ ಕಾಡುತ್ತದೆ.
ಇನ್ನಷ್ಟು ಇರಬೇಕಾಗಿತ್ತೇನೋ ಎಂದುಕೊಳ್ಳುವಷ್ಟರಲ್ಲಿ ಪರದೆ ಬೀಳುತ್ತದೆ. ಪುನೀತ್ ಜೀವನದ ಅಂಕಕ್ಕೂ ತೆರೆಬೀಳುತ್ತದೆ. ಹರಿಯುವ ನೀರಿಗೆ ಕೈ ಮುಗಿದು ಪ್ರಕೃತಿಯ ಆರಾಧನೆಯಲ್ಲಿ ತೊಡಗುವ ಪುನೀತ್ ದೖಶ್ಯದ ಜತೆ ಗಂಧದ ಗುಡಿಗೆ ಅಂತ್ಯವಾಗುತ್ತದೆ.
ಚಿತ್ರದ ಉದ್ದಕ್ಕೂ ಏನನ್ನೋ ಹುಡುಕುತ್ತಾ , ಅದನ್ನೇ ಕನವರಿಸುತ್ತಾ ಸಾಗಿದಂತೆ ಕಾಣುವ ಅಪ್ಪು.. ಕೊನೆಗೆ ಕರುನಾಡಿನ ಜನ ತನ್ನನ್ನೇ ಹುಡುಕುವಂತೆ ಮಾಡಿದ್ದು ಮಾತ್ರ ವಿಧಿ ವಿಪರ್ಯಾಸ.
ಅಪ್ಪು ಎಂಬ ಪುನೀತ ನೀರಿನಲ್ಲಿ ಸಾಗಿಹೋದ. ನಿಸರ್ಗದಲ್ಲಿ ಲೀನನಾದ ಎಂಬ ದಿವ್ಯ ಸಂದೇಶದೊಂದಿಗೆ ಗಂಧದ ಗುಡಿ ಎಂಬ ದಾಖಲಾರ್ಹ ಚಿತ್ರ ಕೊನೆಯಾಗುತ್ತದೆ.
ಬಾಳಿನುದ್ದಕ್ಕೂ ಹಾಡಿ, ಕುಣಿದು, ನಟಿಸಿ ನಲಿದು, ಸಮಾಜಸೇವೆಯ ಮೂಲಕವೂ ಜನರನ್ನು ತಲುಪಿ ದೇವತಾ ಮನುಷ್ಯನಂತಾದ ಪುನೀತ್ ಕೊನೆಯಲ್ಲಿಯೂ ಗಂಧದ ಗುಡಿಯಂಥ ಚಿತ್ರದ ಮೂಲಕ ಕರುನಾಡಿಗೆ ಹೊಸದ್ದೊಂದು ಕೊಡುಗೆ ನೀಡಿದ್ದಾರೆ. ಇಂಥ ಚಿತ್ರವನ್ನು ಅಪ್ಪುವಿನ ಗೈರುಹಾಜರಿಯಲ್ಲಿಯೂ ಕರುನಾಡಿಗೆ ಸಮರ್ಪಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೂ ಶ್ಲಾಘನೆ ಸಲ್ಲಲೇಬೇಕು. ಮಕ್ಕಳು ಕಡ್ಡಾಯವಾಗಿ ನೋಡಲೇಬೇಕಾದ ಗಂಧದ ಗುಡಿ ದೊಡ್ಡವರ ಮನಕ್ಕೆ ಕೂಡ ಮುದನೀಡಬಲ್ಲ ಚಿತ್ರರತ್ನ.
ಗಂಧದ ಗುಡಿಯ ರಾಜಕುಮಾರ ನಮ್ಮಅಪ್ಪು..
ಗಂಧದ ಗುಡಿ ಹೊಂದಿರುವ ಕನ್ನಡ ನಾಡಿನ ಜನರೇ ಪುನೀತರು..
ಗಂಧದ ಗುಡಿ..
ಚಂದದ ಗುಡಿ.!!!