Breaking News
   
   
   

ಡಾ. ಕಸ್ತೂರಿ ರಂಗನ್ ವರದಿಯ ಜಾರಿ ಜನಜೀವನ ಮತ್ತು ಪಟ್ಟಣಗಳ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ; ಜಿ.ಎ.ಸುದರ್ಶನ್

ಕೊಡಗು

news-details

ಮಡಿಕೇರಿ : ಪಶ್ಚಿಮ ಘಟ್ಟ ಪ್ರದೇಶಗಳ ಸಂರಕ್ಷಣೆಯ ಡಾ.ಕಸ್ತೂರಿ ರಂಗನ್ ವರದಿಯ ಜಾರಿ, ಸೂಕ್ಮ ಪರಿಸರ ಪ್ರದೇಶವೆಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿನ ಜನಜೀವನದ ಮೇಲೆ ಮತ್ತು ಪಟ್ಟಣಗಳ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ.ಸುದರ್ಶನ್ ಅಭಿಪ್ರಾಯಿಸಿದರು. ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಂಣದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮತ್ತು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ, ಮಡಿಕೇರಿ ಅರಣ್ಯ ವಿಭಾಗ ಸಹಯೋಗದಲ್ಲಿ ಆಯೋಜಿತ ‘ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತ ಮಾಹಿತಿ ಕಾರ್ಯಾಗಾರ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಸಿರ ಪರಿಸರದ ಅರಣ್ಯ ಸಂಪತ್ತು ಮತ್ತು ಗ್ರಾಮೀಣ ಭಾಗಗಳಲ್ಲಿ ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಕೃಷಿ ಚಟುವಟಿಕೆಗಳ ನಡುವೆ ಅವಿಭಾವ ಸಂಬಂಧವಿದೆ. ಹೀಗಿದ್ದೂ ಇಂತಹ ವಿಚಾರವನ್ನು ಜೀವವೈವಿಧ್ಯತೆಯ ಪರಿಸರ ವಿಚಾರದಿಂದ ಹೊರಗಿಡಲಾಗುತ್ತಿದೆ ಎಂದು ಅವರು ವಿಷಾಧಿಸಿದರು. 

ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಮ ವಲಯಗಳಲ್ಲಿ ಗಣಿಗಾರಿಕೆ ಮೊದಲಾದವುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ. ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ವರದಿಯಿಂದ ಕಡಿವಾಣ ಬೀಳುವ ಸಾಧ್ಯತೆಗಳಿದೆ. ಈ ಹಿನ್ನೆಲೆ ಜಿಲ್ಲೆಯ ವಿರಾಜಪೇಟೆ, ಸೋಮವಾರಪೇಟೆ ಮೊದಲಾದ ಪಟ್ಟಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಷ್ಟಕರವಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಡಾ.ಕಸ್ತೂರಿ ರಂಗನ್ ವರದಿ ಜಾರಿ ಇಲ್ಲವೇ ಅಧಿಕೃತವಾಗಿ ನೋಟಿ ಫೈ ಆದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಜನ ಜೀವನದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದೆ ಎಂದರು.

ನೋಟಿ ಫೈ ಭೂ ಪ್ರದೇಶ:

ಭಾರತದಲ್ಲಿ ಭಗೀರಥ ವ್ಯಾಲಿಯ 4 ಸಾವಿರ ಚದರ ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಮ ಪ್ರದೇಶವಾಗಿ ಘೋಷಿಸಲಾಗಿದ್ದು, ಪ್ರಸ್ತುತ ಇದು ಪರಿಸರ ಸೂಕ್ಮ ಪ್ರದೇಶವಾಗಿ ಘೋಷಿಸಲ್ಪಟ್ಟ ಅತೀ ದೊಡ್ಡ ಪ್ರದೇಶವಾಗಿದೆ. ಆದರೆ, ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ 58 ಸಾವಿರ ಚ.ಕಿ.ಮೀ.ಅನ್ನು ಸೂಕ್ಮ ಪರಿಸರ ವಲಯವನ್ನಾಗಿ ಘೋಷಿಸಬೇಕೆಂದು ಸೂಚಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯದ 20 ಸಾವಿರ ಚ.ಕಿ.ಮೀ. ಪ್ರದೇಶ ಸೇರುತ್ತದೆ. ಇದು ಕರ್ನಾಟಕದ ಒಟ್ಟು ವಿಸ್ತೀರ್ಣದ ಶೇ.10ರಷ್ಟಾಗುತ್ತದೆ. ಇಂತಹ ಸೂಕ್ಮ ಪರಿಸರ ವಲಯದ ಅಂಚಿನಿಂದ 10 ಕಿ.ಮೀ. ವ್ಯಾಪ್ತಿಯೂ ಘೋಷಿಸಲ್ಪಟ್ಟ ಸೂಕ್ಮ ಪರಿಸರ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು ವಿಸ್ತೀರ್ಣದ ಶೇ.20ರಷ್ಟು ಭೂ ಭಾಗ ಸೂಕ್ಮ ಪರಿಸರ ವಲಯವಾಗುತ್ತದೆ ಎಂದು ಮಾಹಿತಿ ನೀಡಿದರು. ಹಿಮಾಲಯ ಪರ್ವತ ಶ್ರೇಣಿ ಈಶಾನ್ಯ ರಾಜ್ಯಗಳವರೆಗೆ ಪಸರಿಸಿದೆ. ಅಲ್ಲಿನ ಭಗೀರಥಿ ವ್ಯಾಲಿಯ 4 ಸಾವಿರ ಚ.ಕಿ.ಮೀ. ವ್ಯಾಪ್ತಿಯನ್ನಷ್ಟೆ ಸೂಕ್ಮ ಪರಿಸರ ವಲಯವನ್ನಾಗಿಸಿರುವಾಗ, ಪಶ್ಚಿಮ ಘಟ್ಟದ ಇಷ್ಟು ದೊಡ್ಡ ಪ್ರಮಾಣದ ಪ್ರದೇಶವನ್ನು ಸೂಕ್ಮ ಪರಿಸರ ವಲಯಕ್ಕೆ ಒಳಪಡಿಸುವ ಅಗತ್ಯವೇನಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಈ ಎಲ್ಲಾ ವಿಚಾರಗಳು ಜನರ ಮುಂದೆ ಚರ್ಚೆಯಾಗಬೇಕಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

news-details