ರಾಜ್ಯದಲ್ಲಿ 82 ಸಂಭವನೀಯ ಭೂಕುಸಿತ-ಪ್ರವಾಹ ಪ್ರದೇಶಗಳ ಗುರುತು, ಕ್ರಮ ಕೈಗೊಳ್ಳದ ಸರ್ಕಾರ..!
**********
ಬೆಂಗಳೂರು: ಪೂರ್ವ ಮುಂಗಾರು ಈಗಾಗಲೇ ಆರಂಭವಾಗಿದ್ದು, ಮಳೆಗಾಲ ಆರಂಭಕ್ಕೆ ಇನ್ನು ಕೇವಲ 2 ತಿಂಗಳಷ್ಟೇ ಬಾಕಿ ಉಳಿದಿದೆ. ಆದರೆ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ರಾಜ್ಯದಲ್ಲಿ ಪಟ್ಟಿ ಮಾಡಿರುವ ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಮಾತ್ರ ರಾಜ್ಯ ಸರ್ಕಾರ ಇನ್ನೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಾಜ್ಯದಲ್ಲಿ ಭೂಕುಸಿತ ಪೀಡಿತ ಸ್ಥಳಗಳನ್ನು ಪಟ್ಟಿ ಮಾಡಿದೆ. ಪಟ್ಟಿಯಂತೆ ರಾಜ್ಯದಲ್ಲಿ 82 ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆಗಳಿದೆ ಎಂದು ತಿಳಿಸಿದೆ.ಪಟ್ಟಿಯಲ್ಲಿ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ, ಮಂಗಳೂರು, ಬೆಳಗಾವಿ, ಗೋವಾದ ಗಡಿಯಲ್ಲಿರುವ ಪ್ರದೇಶಗಳಿರುವುದು ಕಂಡು ಬಂದಿದೆ. ಈ ಸ್ಥಳಗಳಲ್ಲಿ ಮೂಲಸೌಕರ್ಯ ಕಾರ್ಯಗಳು ಮುನ್ನಡೆಯುತ್ತಿದ್ದು, ಭೂಕುಸಿತ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ KSDMA ಎಚ್ಚರಿಕೆ ನೀಡಿದೆ. ಆದರೆ, ಈ ವರೆಗೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ತಿಳಿದುಬಂದಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ಎಸ್. ಹೊನಮ್ಮ ಅವರು ಮಾತನಾಡಿ, ಪೂರ್ವ ಮುಂಗಾರು ಹಾಗೂ ಮಳೆಗಾಲ ಸಮಯದಲ್ಲಿ ಭೂಕುಸಿತ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳಿಗೆ ಸಂಬಂಧಿಸಿದ ಸುತ್ತೋಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಜುಲೈ 16 ರಂದು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶಿರೂರು ಬಳಿ ಭೀಕರ ಭೂಕುಸಿತ ಸಂಭವಿಸಿತ್ತು. ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಈ ಪೈಕಿ ಟ್ರಕ್ ಚಾಲಕನೊಬ್ಬನ ಮೃತದೇಹ ಗಂಗಾವದಿ ನದಿಯಲ್ಲಿ ಪತ್ತೆಯಾಗಿತ್ತು.