ಪಿರಿಯಾಪಟ್ಟಣ : ಶಾಂತಿ ಸಹಬಾಳ್ವೆಯ ಜೀವನ ನಡೆಸುವುದರೊಂದಿಗೆ ಎಲ್ಲಾ ಧರ್ಮವನ್ನು ಗೌರವಯುತವಾಗಿ ಕಾಣುವ ಮೂಲಕ ಜಾತ್ಯತೀತ ಮನೋಭಾವದೊಂದಿಗೆ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದು ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಕರೆ ನೀಡಿದ್ದಾರೆ. ಪಿರಿಯಾಪಟ್ಟಣ ಮಲಬಾರ್ ಜುಮಾ ಮಸೀದಿ ಸಮಿತಿಯಿಂದ ನಡೆದ ಜಿಸ್ನೆ ಮಿಲಾದ್ ಫೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾರತ ದೇಶದಲ್ಲಿ ಪ್ರತಿಯೊಬ್ಬರೂ ಧಾರ್ಮಿಕ ಹಿನ್ನೆಲೆಯೊಂದಿಗೆ ತಮ್ಮದೇ ಆದ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಸೌಹಾರ್ದಯುತವಾಗಿ ಬದುಕು ಸಾಗಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಸಂವಿಧಾನ ವಿರುದ್ಧವಾಗಿ ನಡೆದುಕೊಳ್ಳುವುದರ ಮೂಲಕ ಅಶಾಂತಿ ಸೃಷ್ಟಿಸಲು ಮುಂದಾಗಿರುವ ಪಕ್ಷ ಸಂಘಟನೆಗಳ ವಿರುದ್ಧ ಪ್ರತಿಯೊಬ್ಬರು ಜಾಗೃತರಾಗಬೇಕಿದೆ ಎಂದರು.
ದೇಶದಲ್ಲಿ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ತಮ್ಮದೇ ಆದ ಜೀವನ ನಡೆಸುತ್ತಿದ್ದಾರೆ. ಜಾತ್ಯಾತೀತ ರಾಷ್ಟ್ರವನ್ನ ಒಡೆದು ಆಳುವ ನೀತಿ ಅನುಸರಿಸುತ್ತಿರುವ ಸಂವಿಧಾನ ವಿರೋಧಿಗಳನ್ನು ದೂರ ಇಡಬೇಕಾಗಿದೆ. ಪಿರಿಯಾಪಟ್ಟಣದ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಎಲ್ಲ ಬಾಂಧವರು ಶಾಂತಿ ಸೌಹಾರ್ದತೆಯ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದಾರೆ. ಇಲ್ಲಿ ಯಾವುದೇ ಅಶಾಂತಿಯ ವಾತಾವರಣವಿಲ್ಲ ಎಲ್ಲರೂ ಒಂದೇ ಎನ್ನುವ ಭಾವೈಕ್ಯತೆಯಿಂದ ಬದುಕು ಸಾಗಿಸುತ್ತಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರವಾದಿಯವರು ಇಡೀ ವಿಶ್ವಕ್ಕೆ ಶಾಂತಿ ಸೌಹಾರ್ದತೆಯ ಸಂದೇಶ ಸಾರಿದ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಮಿಲಾದ್ ಅಂಗವಾಗಿ ನಡೆದ ಕಲಾ, ಸಾಹಿತ್ಯ,ದಫ್ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಪುರಸಭಾ ಅಧ್ಯಕ್ಷ ಕೆ.ಮಹೇಶ್ ,ಸದಸ್ಯರಾದ ಮುಶೀರ್, ರವಿ, ಮಲಬಾರ್ ಜುಮಾ ಮಸೀದಿ ಸಮಿತಿ ಅಧ್ಯಕ್ಷ ಮುಹಮ್ಮದ್ ರಾಫಿ,ಕಾರ್ಯದರ್ಶಿ ಸೈದು, ಉಪಾಧ್ಯಕ್ಷ ಮುಹಮ್ಮದ್, ಜಂಟಿ ಕಾರ್ಯದರ್ಶಿ ಹಂಸ ಸಫ, ಉಸ್ತಾದ್ ಮಜೀದ್ ಬಾಖವಿ,ಸಂಶು ಬಾಖವಿ,ಪ್ರಮುಖರಾದ ಜಂಶಾದ್, ನೌಷಾದ್, ಶರೀಫ್, ಹನೀಫ್, ಆಸ್ಕರ್ ಸೇರಿದಂತೆ ಸ್ವಲಾತ್ ಸಮಿತಿಯ ಸದಸ್ಯರುಗಳು ಇದ್ದರು.