ಹುಣಸೂರು : ಹುಣಸೂರು ತಾಲೂಕಿನ ಹೊಸೂರು ಗೇಟ್‌ನ ಮೇಘ ಟ್ರೇಡರ್ಸ್ ರಸಗೊಬ್ಬರ ಮಾರಾಟ ಮಳಿಗೆ, ಗೋದಾಮು ತಪಾಸಣೆ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು ಗೊಬ್ಬರ ಮಾರಾಟ ಮಾಡದಂತೆ ನೋಟೀಸ್ ಜಾರಿ ಮಾಡಿದೆ.
ರಾಜ್ಯ ರೈತ ಸಂಘದ ದೂರಿನ ಮೇರೆಗೆ ಕೃಷಿ ಇಲಾಖೆ ಜಂಟೀ ನಿರ್ದೇಶಕರ ಸೂಚನೆಯಂತೆ ಮೇಘ ಟ್ರೇಡರ್ಸ್ ರಸಗೊಬ್ಬರ ಮಾರಾಟ ಮಳಿಗೆ ಹಾಗೂ ಗೊಬ್ಬರ ದಾಸ್ತಾನು ಗೋದಾಮಿನ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಅಧಿಕಾರಿಗಳು ರಸಗೊಬ್ಬರದ ದಾಸ್ತಾನು, ಮಾರಾಟವಾಗಿರುವ ರಸಗೊಬ್ಬರದ ಸಂಪೂರ್ಣ ಮಾಹಿತಿ ಪಡೆದುಕೊಂಡು ದಾಸ್ತಾನು ಪರಿಶೀಲಿಸಿ ಪೂರ್ಣ ಪ್ರಮಾಣದ ತನಿಖೆಯಾಗುವವರೆಗೂ ಮೇಘ ಟ್ರೇಡರ್ಸ್ ನವರು ರಸಗೊಬ್ಬರ ಮಾರಾಟ ಮಾಡದಂತೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯ ಜಾರಿ ದಳದ ಸಹಾಯಕ ನಿರ್ದೇಶಕ ಕೃಷ್ಣ, ಹುಣಸೂರು ಕೃಷಿ ಇಲಾಖೆ ಹಿರಿಯ ಸಹಾಯಕ ನಿದೇರ್ಶಕ ವೆಂಕಟೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಹಿನ್ನೆಲೆ: ಇತ್ತೀಚೆಗೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮೇಘ ಟ್ರೇಡರ್ಸ್ ನವರಿಗೆ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಕ್ಕೆ ಅಂಗಡಿಯವರು ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ದೂರು ನೀಡಿದ್ದರು, ಗೊಬ್ಬರದ ಅಂಗಡಿ ಮಾಲಿಕ ರಾಮಕೃಷ್ಣ ಸಹ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ರೈತ ಸಂಘದ ಅಧ್ಯಕ್ಷರ ವಿರುದ್ದ ದೂರು ದಾಖಲಿಸಿದ್ದರು, ರೈತ ಸಂಘವು ಈ ಸಂಬಂಧ ಹುಣಸೂರು ಮತ್ತು ಮೈಸೂರಿನಲ್ಲಿ ಪ್ರತಿಭಟನೆ ನಡೆಸಿ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.