ಫುಟ್ ಬಾಲ್ ಹಾಗೂ ಹಾಕಿ ಆಟಗಾರ ಕಳ್ಳಿಚಂಡ ಪ್ರಸಾದ್
ಕೊಡಗಿನ ಕ್ರೀಡಾ ರಂಗದಲ್ಲಿ ಹಲವು ಆಟಗಾರರು ಸಾಧನೆಗಳನ್ನು ಮಾಡಿದ್ದಾರೆ. ಆದರೆ ಒಂದಕ್ಕಿಂತ ಹೆಚ್ಚು ಕ್ರೀಡೆಯಲ್ಲಿ ಹೆಸರು ಮಾಡಿದವರು ಬಹು ವಿರಳ. ಹೀಗಿರುವಾಗ ಹಾಕಿ ಹಾಗೂ ಫುಟ್ ಬಾಲ್ ಎರಡೂ ಕ್ರೀಡೆಯಲ್ಲೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕೊಡಗಿನ ಏಕೈಕ ಆಟಗಾರ ಕಳ್ಳಿಚಂಡ ಪ್ರಸಾದ್.
ದಿವಂಗತ ಕಳ್ಳಿಚಂಡ ಕರುಂಬಯ್ಯ ಸೋಮಯ್ಯ ಹಾಗೂ ನೀಲಮ್ಮ( ತಾಮನೆ ಕರ್ತಮಾಡ) ದಂಪತಿಯರ ಪುತ್ರನಾಗಿ ಪ್ರಸಾದ್ ಅವರು 1950ರಲ್ಲಿ ಸುಳುಗೋಡು ಗ್ರಾಮದಲ್ಲಿ ಜನಿಸಿದರು.
ಶಿಕ್ಷಣ
ಪ್ರಾಥಮಿಕ ಶಿಕ್ಷಣವನ್ನು ಸುಳುಗೋಡು ಹಾಗೂ ಮಾಯಮುಡಿಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಮೈಸೂರು ದಳವಾಯಿ ಪ್ರೌಢಶಾಲೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಮೈಸೂರು ಯುವರಾಜ ಕಾಲೇಜಿನಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿಯನ್ನು 1972 ಪಡೆದರು.
ಕ್ರೀಡಾ ಲೋಕಕ್ಕೆ ಪಾದಾರ್ಪಣೆ
ಪ್ರಸಾದ್ ಅವರು ಬಾಲ್ಯದಿಂದಲೂ ಕ್ರೀಡೆಯನ್ನು ಆಡುತ್ತಿದ್ದರೂ, ಹಾಕಿ ಹಾಗೂ ಫುಟ್ ಬಾಲ್ ನಲ್ಲಿ ವಿಶೇಷ ಒಲವಿತ್ತು. ಇದು ಅವರು ಕ್ರೀಡಲೋಕಕ್ಕೆ ಪಾದಾರ್ಪಣೆ ಮಾಡಲು ನಾಂದಿ ಹಾಡಿತು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿಯನ್ನು ಓದುತ್ತಿರುವಾಗಲೇ 1969-72 ರವರೆಗೆ 3 ವರ್ಷಗಳ ಕಾಲ ಮೈಸೂರು ಯುನಿವರ್ಸಿಟಿಯನ್ನು ಹಾಕಿಯಲ್ಲಿ ಪ್ರತಿನಿಧಿಸಿದ್ದರು. 1971-72 ವರೆಗೆ ಫುಟ್ ಬಾಲ್ ಅನ್ನು ಕೂಡ ಪ್ರತಿನಿಧಿಸಿ ಕ್ಯಾಲಿಕಟ್ ಹಾಗೂ ಕೇರಳದಲ್ಲಿ ಮೈಸೂರು ಯುನಿವರ್ಸಿಟಿಯ ಪರ ಆಡಿದರು.
ಹೀಗೆ ಕಾಲೇಜು ದಿನಗಳಲ್ಲಿ ಮೈಸೂರು ಯುನಿವರ್ಸಿಟಿಯನ್ನು ಹಾಕಿ ಹಾಗೂ ಫುಟ್ ಬಾಲ್ ಎರಡರಲ್ಲೂ ಪ್ರತಿನಿಧಿಸಿದ್ದರು.
ಪ್ರಶಸ್ತಿಗಳು
1971-72 ರಲ್ಲಿ ಫುಟ್ ಬಾಲ್ ನಲ್ಲಿ ಬೆಸ್ಟ್ ಗೋಲ್ ಕೀಪರ್ ಆಫ್ ಸೌತ್ ಇಂಡಿಯಾ ಪ್ರಶಸ್ತಿ ಹಾಗು ಮಲಯಾಳ ಮನೋರಮ ಪ್ರಶಸ್ತಿ ಲಭಿಸಿತು.
ಸ್ನಾತಕೋತ್ತರ ಪದವಿ ಪಡೆಯಲು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಗೆ ಪ್ರವೇಶ ಪಡೆದರು. ಅಲ್ಲಿಯೂ ಸಹ ಹಾಕಿ ಹಾಗೂ ಫುಟ್ ಬಾಲ್ ಪಂದ್ಯಾಟಗಳಲ್ಲಿ ಮದ್ರಾಸ್ ಯುನಿವರ್ಸಿಟಿಯನ್ನು ಪ್ರತಿನಿಧಿಸಿದ್ದರು.
2001-04 ವರೆಗೆ ಲಾನ್ ಟೆನ್ನಿಸ್ ನಲ್ಲಿ ಕಲ್ಕತ್ತಾ ಯುನಿವರ್ಸಿಟಿ ಪರ ಆಡಿದರು.
ಮೊಹಮ್ಮದನ್ ಸ್ಫೋರ್ಟಿಂಗ್ ಕ್ಲಬ್
1973 ರಲ್ಲಿ ಭಾರತದ ಹೆಸರಾಂತ ಫುಟ್ ಬಾಲ್ ಕ್ಲಬ್ ಮೊಹಮ್ಮದನ್ ಸ್ಫೋರ್ಟಿಂಗ್ ಕ್ಲಬ್ ನ ವೃತ್ತಿಪರ ಫುಟ್ ಬಾಲ್ ಆಟಗಾರನಾಗಿ ಆಡಲು ಅವಕಾಶ ಸಿಕ್ಕಿತು. ಈ ಕ್ಲಬ್ ನಲ್ಲಿ ಆಡಿದ ಪ್ರಥಮ ಕೊಡಗಿನ ಗೋಲ್ ಕೀಪರ್ ಪ್ರಸಾದ್.
ಮೊಹಮ್ಮದನ್ ಸ್ಫೋರ್ಟಿಂಗ್ ಕ್ಲಬ್ ಗೆ ಇವರು ಆಡುವಾಗ ಪ್ರೇಕ್ಷಕರು ಅಲ್ಲಿಗೆ ಕಿಕ್ಕಿರಿದು ಬರುತ್ತಿದ್ದರು. ಹೀಗೆ ಕಿಕ್ಕಿರಿದ ಪ್ರೇಕ್ಷಕರ ಮಧ್ಯ ಆಡುವುದು ಅಷ್ಟು ಸುಲಭವಲ್ಲ. ಇವೆಲ್ಲವುಗಳ ಮಧ್ಯೆ ಇವರು ಹಾಕಿಯಲ್ಲಿ ಫಾರ್ವರ್ಡ್ ಆಟಗಾರನಾಗಿ ಹಾಗೂ ಫುಟ್ ಬಾಲ್ ನಲ್ಲಿ ಗೋಲ್ ಕೀಪರ್ ಆಗಿ ರಾಷ್ಟ್ರಮಟ್ಟದಲ್ಲಿ ಆಡಿದ ದ್ವಿಮುಖ ಪ್ರತಿಭೆಯ ಆಟಗಾರ.
ಪ್ರಮುಖ ಫುಟ್ ಬಾಲ್ ಪಂದ್ಯಾವಳಿಗಳು
1973ರಲ್ಲಿ ಮೊಹಮ್ಮದನ್ ಸ್ಫೋರ್ಟಿಂಗ್ ಕ್ಲಬ್ ಗೆ ಸೇರಿದ ನಂತರ ಹಲವು ಫುಟ್ ಬಾಲ್ ಪಂದ್ಯಾವಳಿಗಳಲ್ಲಿ ಆಡಿದರು.
ಅವುಗಳಲ್ಲಿ ಪ್ರಮುಖ ಪಂದ್ಯಾವಳಿಗಳೆಂದರೆ ದೆಹಲಿಯಲ್ಲಿ ನಡೆದ ದುರಂದ್ ಕಪ್ ಹಾಗೂ ಡಿ.ಸಿ.ಎಂ ಕಪ್, ಕ್ಯಾಲಿಕಟ್ ನಲ್ಲಿ ನಡೆದ ನಾಗ್ಜು ಕಪ್, ಕಲ್ಕತ್ತಾದಲ್ಲಿ ನಡೆದ ಐ.ಎಫ್.ಎ ಶೀಲ್ಡ್ ಪಂದ್ಯಾವಳಿ, ಗೌಹಾಟಿಯಲ್ಲಿ ನಡೆದ ಬೋರ್ ದೋಲಿ ಕಪ್ ಹಾಗೂ ಕಲ್ಕತ್ತಾ ಫುಟ್ ಬಾಲ್ ಲೀಗ್.
ಕೊಡಗಿನಲ್ಲಿ ಹಾಕಿ ಪಂದ್ಯಾವಳಿ
ಪ್ರಸಾದ್ ಅವರು ನೋಡಲು ಬಲು ಆಕರ್ಷಕ ವ್ಯಕ್ತಿ, ಉತ್ತಮ ಮೈಕಟ್ಟು ಹಾಗೂ ಕೌಶಲ್ಯ ಭರಿತ ಆಟ. ಇವರು ಅಬಕಾರಿ ಇಲಾಖೆಯ ಸಮವಸ್ತ್ರ ಧರಿಸಿ ನಿಂತಾಗ, ಯಾರೋ ವಿದೇಶಿ ಅಧಿಕಾರಿ ಬಂದರೆಂದು ಭಾವಿಸಿ ಎಲ್ಲರೂ ಇವರನ್ನೇ ನಿಂತು ನೋಡುತ್ತಿದ್ದರು. ಕೊಡಗಿನ ಹಾಕಿ ಪಂದ್ಯಾವಳಿಯಲ್ಲಿ ಅಮ್ಮತ್ತಿ-ಬಿ ತಂಡಕ್ಕೆ ಗೋಲ್ ಕೀಪರ್ ಆಗಿ ಆಡಿ, ಟೈ ಬ್ರೆಕರ್ ನ ಪೆನಾಲ್ಟಿ ಪುಶ್ ನಲ್ಲಿ ಗೋಲ್ ಪೋಸ್ಟ್ ನ ಎಡ ಭಾಗದಲ್ಲಿ ನಿಂತು ಐದಕ್ಕೆ ಐದು ಗೋಲುಗಳನ್ನು ಅದ್ಭುತವಾಗಿ ತಡೆದು ಅತ್ಯುತ್ತಮ ಗೋಲ್ ಕೀಪರ್ ಎಂದು ಹೆಸರು ಮಾಡಿದ್ದು ಮಾತ್ರವಲ್ಲದೆ ಹಾಕಿ ಆಟಗಾರರಿಗೂ ಹೇಗೆಲ್ಲ ಗೋಲ್ ಕೀಪಿಂಗ್ ಮಾಡಬಹುದು ಎಂಬ ನೀತಿ ಪಾಠವನ್ನು ಕಲಿಸಿಕೊಟ್ಟ ಆಟಗಾರ.
2006ರಲ್ಲಿ ಕಳ್ಳಿಚಂಡ ಹಾಕಿ ಹಬ್ಬಕ್ಕೆ ನಾಲ್ಕು ಬಾರಿ ಒಲಂಪಿಕ್ಸ್ ಆಡಿದ ಲೆಸ್ಲಿ ವಾಲ್ಟರ್ ಕ್ಲಾಡಿಯಸ್ ಅವರನ್ನು ಕರೆತಂದರು. ಲೆಸ್ಲಿ ಅವರು ಈ ಪಂದ್ಯಾಟವನ್ನು ಒಂದು ವಾರಗಳ ಕಾಲ ಕೊಡಗಿನಲ್ಲೆ ಇದ್ದು ವೀಕ್ಷಿಸಿದರು. ಇವರನ್ನು ಬೀಳ್ಕೊಡುವಾಗ ಕೊಡವ ಸಂಪ್ರದಾಯದ ಪೀಚೆಕತ್ತಿಯನ್ನು ಉಡುಗೊರೆಯಾಗಿ ನೀಡಲಾಯಿತು.
ಅಬಕಾರಿ ಇಲಾಖೆಗೆ ಸೇರ್ಪಡೆ
1975ರಲ್ಲಿ ಕಲ್ಕತ್ತಾದಲ್ಲಿ ಅಬಕಾರಿ ಇಲಾಖೆಗೆ ಸೇರ್ಪಡೆಗೊಂಡರು. ಅಲ್ಲಿ ಬೇಟನ್ ಕಪ್, ಬಾಂಬೆ ಗೋಲ್ಡ್ ಕಪ್, ದೆಹಲಿಯ ನೆಹರು ಗೋಲ್ಡ್ ಕಪ್, ಬಾಂಬೆಯ ಆಗಾಖಾನ್ ಕಪ್ ಮುಂತಾದ ಪಂದ್ಯಾವಳಿಗಳಲ್ಲಿ ಕೇಂದ್ರ ಅಬಕಾರಿ ಇಲಾಖೆ ತಂಡದ ಪರ ಆಡಿದರು.
ರಂಗಸ್ವಾಮಿ ಕಪ್ ನ್ಯಾಷನಲ್ಸ್
1977-79 ವರೆಗೆ ಬೆಂಗಾಲ್ ನ ರಾಜ್ಯ ಹಾಕಿ ತಂಡದ ಪರ ಮಧುರೈ ಹಾಗೂ ಹೈದರಾಬಾದ್ ನಲ್ಲಿ ನಡೆದ ರಂಗಸ್ವಾಮಿ ಕಪ್ ನ್ಯಾಷನಲ್ಸ್ ಆಡಿದ ಕೊಡಗಿನ ಆಟಗಾರ.
2009ರಲ್ಲಿ ಕೇಂದ್ರ ಅಬಕಾರಿ ಇಲಾಖೆಯಿಂದ ಅಸಿಸ್ಟೆಂಟ್ ಕಮಿಷನರ್ ಆಗಿ ನಿವೃತ್ತಿ ಪಡೆದರು.
ತಂದೆಯಂತೆ ಪ್ರತಿಭಾವಂತ ಮಕ್ಕಳು
ಇವರ ಮಕ್ಕಳಿಬ್ಬರು ಇವರಂತೆಯೇ ಪ್ರತಿಭಾವಂತರು. ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹೆಸರು ಗಳಿಸಿದ್ದಾರೆ.
ಮಗಳು ಶೃತಿ ಅತ್ಯುತ್ತಮ ಲೇಖಕಿ. ಮೂಲತಃ ಕೊಡಗಿನವರಾದರು ಹುಟ್ಟಿ ಬೆಳೆದಿದ್ದು ಕಲ್ಕತ್ತಾದಲ್ಲಿ, ಮಂಗಳೂರು ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪದವಿಯನ್ನು ಪಡೆದು, ಉಡುಪಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಇವರು ಬರೆದ ಮೊದಲ ಪುಸ್ತಕ "ಹುಕ್ಕಾ ಹಿಟ್ಸ್", ಪ್ರತಿಷ್ಠಿತ ಆರ್ಥರ್ಸ್ ಇಂಕ್ ಪಬ್ಲಿಕೇಶನ್ ಅವರು ಪ್ರಕಟಿಸಿದ್ದು ಹೆಮ್ಮೆಯ ವಿಷಯ. ಈ ಪುಸ್ತಕ ಆನ್ಲೈನ್ ಮಾರುಕಟ್ಟೆಯ ದೈತ್ಯ ಸಂಸ್ಥೆಯಾದ ಅಮೆಜಾನ್ ನಲ್ಲಿ ಹಲವು ತಿಂಗಳು ಟಾಪ್ ಟ್ರೆಂಡಿಂಗ್ ನ ಪುಸ್ತಕವಾಗಿತ್ತು. ಈ ಪುಸ್ತಕವು ಕೊಚ್ಚಿನ್ ನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಪುಸ್ತಕೋತ್ಸವಕ್ಕೆ ಆಯ್ಕೆಯಾಗಿತ್ತು. ಇದು ಭಾರತದ ಆರನೇ ಅತಿ ದೊಡ್ಡ ಪುಸ್ತಕೋತ್ಸವ ನಡೆಯುವ ಸ್ಥಳ. ಇವರು ದೇವಣಿರ ಕವೀಶ್ ಪೂವಯ್ಯ ಅವರನ್ನು ವರಿಸಿ ಪ್ರಸ್ತುತ ಕೊಡಗಿನಲ್ಲೇ ನೆಲೆಸಿದ್ದಾರೆ.
ಇವರ ಮಗ ನಿಶನ್ ನಾಣಯ್ಯ ಅವರು ತಮ್ಮ ಕಿರು ಚಿತ್ರ "ಆಲ್ಫಾ ಬೀಟಾ ಗ್ಯಾಮಾ" ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದರು. ಫಿಲ್ಮ್ ಹಾಗೂ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಪದವಿ ಪಡೆದ ಇವರು, ಪುಣೆಯಲ್ಲಿ "ಸೈಕಲ್ ಕಿಕ್" ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಹೆಜ್ಜೆ ಇಟ್ಟು 25ಕ್ಕೂ ಹೆಚ್ಚು ಹಿಂದಿ, ಬೆಂಗಾಲಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟಿಸಿದ "ಅಲ್ಫಾ ಬೀಟಾ ಗ್ಯಾಮಾ" ಕಿರುಚಿತ್ರವು ಬರ್ಲಿನ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಂಡಿತ್ತು.
ಇವರ ಪತ್ನಿ ಪದ್ಮ(ತಾಮನೆ ಕಾಡ್ಯಮಾಡ) 2013 ರಲ್ಲಿ ದೈವಾಧೀನರಾದರು. ಪ್ರಸಾದ್ ಅವರು ಪ್ರಸ್ತುತ ಸುಳುಗೋಡಿನಲ್ಲಿ ನೆಲೆಸಿದ್ದಾರೆ. ಹಾಕಿ ಕೂರ್ಗ್ ನ ಸಂಸ್ಥಾಪಕ ಸದಸ್ಯ ಹಾಗೂ ಹಿರಿಯ ಉಪಾಧ್ಯಕ್ಷರು, ಹಾಗು ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಉಪಾಧ್ಯಕ್ಷರರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಕಿ ಆಟಗಾರರಿಗೆ ಈಗಲೂ ಕೂಡ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಅಂಕಣಗಾರನ ಅನಿಸಿಕೆ
ಇವರಂತೆಯೇ ದ್ವಿಮುಖ ಪ್ರತಿಭೆಯ ಆಟಗಾರರು ಕೊಡಗಿನಲ್ಲಿ ಮತ್ತಷ್ಟು ಬೆಳೆಯಲಿ ಹಾಗು ಈಗಿನ ಯುವ ಆಟಗಾರರಿಗೆ ಈ ಲೇಖನ ಆಶಾಕಿರಣವಾಗಲಿ ಎಂಬುದೇ ನನ್ನ ಉದ್ದೇಶ. ಇವರ ಕ್ರೀಡಾ ಚರಿತ್ರೆಯನ್ನು ಓದುಗರಿಗೆ ಹಾಗು ಕ್ರೀಡಾ ಪ್ರೇಮಿಗಳಿಗೆ ತಿಳಿಸಿದ್ದು ನನಗೆ ಬಹಳ ಸಂತಸ ತಂದಿದೆ. ಇಂತಹ ಪ್ರತಿಭೆಗಳು ಕೇವಲ ಬೆರಳೆಣಿಕೆಯಷ್ಟು ಬಾಕಿ ಇದ್ದು, ಅವರ ಜೀವನ ಚರಿತ್ರೆಯನ್ನು ಪರಿಚಯಿಸಿ ಮುಂದೆ ಯುವ ಅಂಕಣಗಾರರು ಹಾಗೂ ವೀಕ್ಷಕ ವಿವರಣೆಗಾರರು ಬರಲಿ ಎಂದು ಹಾರೈಸುತ್ತಾ, ಯುವ ಪೀಳಿಗೆಗೆ ದಾರಿ ಮಾಡಿಕೊಡಲು ನಿಶ್ಚಯಿಸಿದ್ದೇನೆ. ಇದಕ್ಕೆ ನಿಮ್ಮ ಸ್ನೇಹ ಮತ್ತು ಸಹಕಾರವಿರಲಿ.
ಕ್ರೀಡಾ ವಿಶ್ಲೇಷಣೆ
✍️-ಚೆಪ್ಪುಡೀರ ಕಾರ್ಯಪ್ಪ