Breaking News
   
   
   

ಹಾಕಿ ಆಟಗಾರರಿಗೆ ನೆರಳಿನಂತಿದ್ದ ಮಾಲೆಟೀರ ಶೆರಿ ಬೆಳ್ಳಿಯಪ್ಪ

ಕೊಡಗು

news-details

ಹಾಕಿ ಆಟಗಾರರಿಗೆ ನೆರಳಿನಂತಿದ್ದ ಮಾಲೆಟೀರ ಶೆರಿ ಬೆಳ್ಳಿಯಪ್ಪ 
ಮಾಲೆಟೀರ ಶೆರಿ ಬೆಳ್ಳಿಯಪ್ಪ ಅವರು ತಮ್ಮ ಬದುಕಿನುದ್ದಕ್ಕೂ ಹಲವು ಸವಾಲುಗಳನ್ನು ಎದುರಿಸುತ್ತಲೇ ನಡೆದರು. ನ್ಯಾಯಕ್ಕಾಗಿ ಬದ್ಧ, ಅನ್ಯಾಯವನ್ನೆಂದೂ ಸಹಿಸಿದವರಲ್ಲ. ಕ್ರೀಡಾ ವಲಯದಲ್ಲಿ ಅವರೊಬ್ಬ ಚೈತನ್ಯಶೀಲ ವ್ಯಕ್ತಿ ಆಗಿದ್ದರು.
   70 ರಿಂದ 90ರ ದಶಕದವರೆಗೆ ಬೆಂಗಳೂರಿನಲ್ಲಿ ತಮ್ಮ ವಕೀಲ ವೃತ್ತಿಜೀವನ ನಡೆಸಿದರು. ಇವರು ಸ್ವತಃ ಹಾಕಿ ಆಟಗಾರರಲ್ಲದಿದ್ದರೂ ಈ ಆಟದ ಬಗ್ಗೆ ಸಂಪೂರ್ಣ ತಿಳಿದಿದ್ದರು. ಕ್ರೀಡಾ ಆಡಳಿತಗಾರರಾಗಿ ದುಡಿದು ಯುವ ಪ್ರತಿಭೆಗಳನ್ನು ಬೆಳಕಿಗೆ ತಂದರು. ಹಾಕಿ ಆಟಗಾರರ ಬೆಳವಣಿಗೆಗೆ ಕೊಡಗು ಮತ್ತು ಬೆಂಗಳೂರು ಹಾಕಿ ವಲಯಗಳ ನಡುವೆ ಸೇತುವೆಯಂತಿದ್ದರು.
     ಹಾಕಿ ಕ್ರೀಡೆಗೆ ಹೊಸ ಪೀಳಿಗೆಯ ಹುಡುಗರನ್ನು ತರಲೆಂದು ಖುದ್ದು ಖಾಸಗಿ ಹಾಕಿ ಕ್ಲಬ್ ಒಂದನ್ನು ಹುಟ್ಟು ಹಾಕಿದ್ದರು. "ಕೂರ್ಗ್ ಬ್ಲೂಸ್" ಕ್ಲಬ್ಬಿನ ಹೆಸರು, ಶೆರಿ ಬೆಳ್ಳಿಯಪ್ಪ ತಮ್ಮ ಕ್ಲಬ್‌ನಲ್ಲಿ ಆನೇಕ ಹುಡುಗರಿಗೆ ಹಾಕಿ ತರಬೇತಿ ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದರ ಜೊತೆಗೆ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಆಡಳಿತ ವರ್ಗದಲ್ಲಿ ಹಲವು ಸಮಿತಿ ಗಳಲ್ಲಿ ಉತ್ಸಾಹದಿಂದ ತಮ್ಮ ಸೇವೆ ಸಲ್ಲಿಸಿದ್ದರು. ಹಾಕಿ ಸಂಸ್ಥೆಯಲ್ಲಿ ಹತ್ತು ಬಾರಿ ಉಪಾಧ್ಯಕ್ಷರಾಗಿ ಮತ್ತು ಹತ್ತು ಬಾರಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಬೆಳ್ಳಿಯಪ್ಪ ಸೇವೆ ಸಲ್ಲಿಸಿದ್ದಾರೆ. 
  ಸ್ನೇಹಮಯಿ ವಕೀಲ 
      ಬೆಳ್ಳಿಯಪ್ಪ ಅವರದ್ದು ವಿಶೇಷವಾದ ವ್ಯಕ್ತಿತ್ವ, ಖಾಸಗಿ ಬದುಕಿನಲ್ಲಾಗಲಿ, ವೃತ್ತಿ ಬದುಕಿನಲ್ಲಾಗಲಿ ನುಡಿದಂತೆ ನಡೆದರು ಮತ್ತು ನಡೆದಂತೆ ನುಡಿದರು. ಹೊರ ನೋಟಕ್ಕೆ ಕೊಂಚ ಬಿಗುವಿನ ಮನುಷ್ಯರಂತೆ ಕಂಡರೂ ಸ್ನೇಹಮಯಿ, ಎಲ್ಲರನ್ನೂ ಆತ್ಮೀಯತೆಯಿಂದ ಕಾಣುವ ಮನೋಭಾವ, ಭಾವಾವೇಶಕ್ಕೆ ಒಳಗಾದವರಲ್ಲ, ಎದುರಾದ ಯಾವುದೇ ಸಮಸ್ಯೆಯನ್ನು ಹಗುರವಾಗಿ ಬಗೆಹರಿಸಬಲ್ಲವರಾಗಿದ್ದರು. ಕ್ಲಿಷ್ಟಕರ ಸಮಸ್ಯೆಗಳಿಗೆ ಹೋರಾಟದ ಹಾದಿ ಹಿಡಿದು ಉತ್ತರ ಕಂಡುಕೊಡುತ್ತಿದ್ದರು.
     ಶೆರಿ ಬೆಳ್ಳಿಯಪ್ಪ ವೃತ್ತಿಯಲ್ಲಿ ವಕೀಲರಾಗಿದ್ದವರು. ಹೈಕೋರ್ಟ್‌ನಲ್ಲಿ ಬಹಳ ವರ್ಷ ಸೇವೆ ಸಲ್ಲಿಸಿದ್ದ ಇವರು ಪೊನ್ನಪ್ಪನವರ ನಿಕಟವರ್ತಿ, ಅನೇಕ ಬಾರಿ ಹಾಕಿ ತಂಡಗಳ ನಡುವಿನ ಜಗಳಗಳನ್ನು ಕಂಡಿದ್ದರು. ಕ್ಷುಲ್ಲಕ ಕಾರಣಗಳಿಗೆ ಬಡಿದಾಡಿಕೊಳ್ಳು ಹಂತಕ್ಕೆ  ತಲುತ್ತಿದ್ದ ಆಟಗಾರರನ್ನು ನೋಡಿದ ಬೆಳ್ಳಿಯಪ್ಪನವರು "ಪ್ರಪಂಚ ಇರುವುದು ಹೀಗೆ, ಕ್ರೀಡಾಪಟುಗಳು ಇಂಥದ್ದೇ ಸ್ವಭಾವ ಉಳ್ಳವರಾಗಿರುತ್ತಾರೆ. ಅದಕ್ಕಾಗಿ ತಲೆಕೆಡಿಸಿಕೊಳ್ಳಬಾರದು" ಎಂದು ಹೇಳುತ್ತಿದ್ದರಾದರೂ ಜಾಣ್ಮೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಕೈಮೀರಿ ಹೋದಲ್ಲಿ, ಕಾನೂನು ಬಾಹಿರವಾಗಿ ಯಾರಾದರೂ ನಡೆದುಕೊಂಡಲ್ಲಿ ಮುಲಾಜಿಲ್ಲದೆ ಅಂಥವರ ವಿರುದ್ಧ ಶಿಸ್ತು ಸಮಿತಿ ಅಧ್ಯಕ್ಷರಿಗೆ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡುತ್ತಿದ್ದರು. 
 ಶಾರದಾ ಲಂಚ್ ಹೋಂ 
        ಬೆಂಗಳೂರಿನ ಕಾಕ್ಸ್ ಟೌನ್ ನಲ್ಲಿ ಇವರಿದ್ದ ಶಾರದಾ ಲಂಚ್ ಹೋಂನಲ್ಲಿ, ಇವರ ಕಚೇರಿಯ ಮೇಲ್ಮಹಡಿಯ 3-4 ಕೊಠಡಿಗಳನ್ನು ಕೊಡಗಿನಿಂದ ಬೆಂಗಳೂರಿಗೆ ಬರುವ ಆಟಗಾರರಿಗೆ ತಂಗಲು ವಸತಿ ಹಾಗೂ ಊಟದ ವ್ಯವಸ್ಥೆಗಳನ್ನು ಕಲ್ಪಿಸಿ ಸಾಕಿ ಸಲಹುತಿದ್ದರು.
       ಹಿನ್ನೆಲೆ : ವೀರಾಜಪೇಟೆ ಕಕ್ಲೂರು ಗ್ರಾಮದ (ಬೈಗೋಡು) ಮಾಳೇಟೀರ ಸುಬ್ಬಯ್ಯ ಮತ್ತು ಬೊಳ್ಳವ್ವ (ತಾಮನೆ ಕೊಂಗೇಟಿರ) ದಂಪತಿಗಳಿಗೆ ಒಟ್ಟು ಹತ್ತು ಮಂದಿ ಮಕ್ಕಳಲ್ಲಿ ಬೆಳ್ಳಿಯಪ್ಪ ಏಳನೇಯವರು.
1942ರಲ್ಲಿ ಜನಿಸಿದ ಶೆರಿ ಬೆಳ್ಳಿಯಪ್ಪ, ಪ್ರಾಥಮಿಕ ವಿದ್ಯಾಭ್ಯಾಸವನ್ನು ದಕ್ಷಿಣ ಕೊಡಗಿನ ಸರ್ಕಾರಿ ಪ್ರೌಢಶಾಲೆಯಲ್ಲಿ, ನಂತರ ಮಡಿಕೇರಿ ಸರ್ಕಾರಿ ಕಾಲೇಜ್‌ನಲ್ಲಿ ವ್ಯಾಸಾಂಗ ಮಾಡಿ ಪದವಿ ಪಡೆದರು. ನಂತರ ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಕಾನೂನು ಪದವಿ, ಬೆಂಗಳೂರಿನಲ್ಲಿ ವಕೀಲ ವೃತ್ತಿ ಮತ್ತು ಕ್ರೀಡಾ ಆಡಳಿತ ಸೇವೆ. ಇವರ ಸ್ನೇಹಿತರ ವಲಯ ದೊಡ್ಡದು.
      ಕರ್ನಾಟಕ ರಾಜ್ಯ ಹಾಕಿ ಸಮಿತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದ ಬೆಳ್ಳಿಯಪ್ಪ ನಿಷ್ಪಕ್ಷಪಾತವಾಗಿ ಆಟಗಾರರನ್ನು ರಾಜ್ಯ ತಂಡಗಳಿಗೆ ಆಯ್ಕೆ ಮಾಡುತ್ತಿದ್ದರು. ತಂಡದ ಆಯ್ಕೆಯಲ್ಲಿ ಕೊಡಗಿನ ಆಟಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದರು. ಇವರಿಂದ ನೈಜ ಆಟಗಾರರು ಎತ್ತರಕ್ಕೆ ಬೆಳೆದರು. ಆಗೆಲ್ಲಾ ಸ್ಟಾರ್ ಆಟಗಾರರನ್ನು ಕೊಡಗಿಗೆ ಕರೆತಂದು ಹೊಸ ಪೀಳಿಗೆಯ ಆಟಗಾರರನ್ನು ಹುರಿದುಂಬಿಸುತ್ತಿದ್ದರು. 
     ಶೆರಿ ಬೆಳ್ಳಿಯಪ್ಪ ಎಂದರೆ ಹಾಕಿಯ ಸ್ವಾಭಿಮಾನದ ಪ್ರತೀಕ. ಹಾಕಿ ಕ್ಷೇತ್ರದ ಎಲ್ಲರಿಗೂ ತುಂಬಾ ಇಷ್ಟವಾಗುತ್ತಾ ಹೋಗುತ್ತಾರೆ. ಇಂತಹ ಸರಳ ವ್ಯಕ್ತಿ ಹಾಕಿಯ ದೊಡ್ಡ ಆಸ್ತಿ ಆಗಿದ್ದರು. ಕೊಡಗಿನ ತರುಣ ಆಟಗಾರರಿಗೆ ಪ್ರೇರಕ ಶಕ್ತಿಯಾಗಿ, ಭವಿಷ್ಯಕ್ಕೆ "ಗಾಡ್ ಫಾದರ್" ಆಗಿ ಗಮನ ಸೆಳೆದಿದ್ದು ಹೆಮ್ಮೆಯ ವಿಷಯ. ಹಾಕಿ ವಲಯದ ಹಿರಿಯ, ಕಿರಿಯರೆಲ್ಲರನ್ನೂ ಒಂದೇ ಭಾವನೆಯಿಂದ ಕಾಣುತ್ತಿದ್ದ, ಅವರು ಕಾರ್ಯದಕ್ಷತೆಗೆ ಸಾಕ್ಷಿಯಾಗಿದ್ದರು. 
     ಅಂದಿನ ಕಾಲದಲ್ಲಿ ಕೊಡಗಿನಲ್ಲಿ ನಡೆಯುತ್ತಿದ್ದ ಪ್ರಮುಖ ಟೂರ್ನಿಗಳಿಗೆ ಕೊಡಗು ಇಲೆವೆನ್ ತಂಡದ ಹೆಸರಿನಲ್ಲಿ ಆಟಗಾರರನ್ನು ಅತಿಥಿ ಆಟಗಾರರಾಗಿ ಕರೆದುಕೊಂಡು ಬರುತ್ತಿದ್ದರು. ಇದರಿಂದ ಬೆಳ್ಳಿಯಪ್ಪ ಅವರ ಕ್ರೀಡಾ ಮನೋಭಾವ ಕೊಡಗಿನ ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯವಾಗಿತ್ತು. ಬಲ್ಟಿಕಾಳಂಡ ರಘು ಮೇದಪ್ಪ, ಅಮ್ಮಂಡ ವಾಸು ಉತ್ತಯ್ಯ, ಕ್ಯಾಲೇಟಿರ ಪಾಲ್ ಸುಬ್ಬಯ್ಯ, ಆಯ್ಯುಡ ವೇಣು ಉತ್ತಪ್ಪ, ಪಾರುವಂಗಡ ನಂದು ನಂಜಪ್ಪ, ಮುಕ್ಕಾಟರ ಅಪ್ಪಚ್ಚು ಮುಂತಾದವರು ಕೊಡಗು ಇಲೆವೆನ್ ತಂಡದಲ್ಲಿ ಆಡುತ್ತಿದ್ದರು. ಇವರ ಆಟ ನೋಡಲು ಕ್ರೀಡಾಭಿಮಾನಿಗಳು ಕಕ್ಕಿರಿದು ನೆರೆದಿರುತ್ತಿದ್ದರು. ಕೊಡಗಿನಲ್ಲಿ ಅನೇಕ ಹಾಕಿ ಪಂದ್ಯಾಟಗಳನ್ನು ಗೆದ್ದ ಕೀರ್ತಿ ಈ ತಂಡಕ್ಕಿತ್ತು.
 ಹೀಗೊಂದು ಟೂರ್ನಿ 
      ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಅಂದು ನಡೆಯುತ್ತಿದ್ದ ನೆಲ್ಲಮಕ್ಕಡ ಉತ್ತಪ್ಪ ಮೆಮೋರಿಯಲ್ ಟೂರ್ನಿ ಕೂರ್ಗ್ - 11 ವಿರುದ್ಧ ಬಿ.ಬಿ.ಸಿ ತಂಡ ಆಡಿತು. ಬಿ.ಬಿ.ಸಿ ಆಟಗಾರರಾದ ಅಚ್ಚಕಾಳೀರ ಪಳಂಗಪ್ಪ, ಎಂ.ಪಿ.ಗಣೇಶ್, ವಾಂಜಂಡ ಚರ್ಮಣ, ಕೂತಂಡ ಚೆಂಗಪ್ಪ, ಮುಂಡುಮಾಡ ರಾಮು, ಕೊಕ್ಕಂಡ ತಿಮ್ಮು, ಮುಂತಾದವರು ತಮ್ಮ ಆಟದ ಮೂಲಕ ಅದ್ಭುತ ರಸದೌತಣವನ್ನು ಪ್ರೇಕ್ಷಕರಿಗೆ ಉಣಬಡಿಸಿದರು. 
      ಕೊಡಗಿನ ಅನೇಕ ಆಟಗಾರರಿಗೆ ಬೆಂಗಳೂರಿನ ವಿವಿಧ ಸಾರ್ವಜನಿಕ ಉದ್ದಿಮೆಗಳಲ್ಲಿ ಉದ್ಯೋಗ ಒದಗಿಸುವಲ್ಲಿ ಶೆರಿ ಬೆಳ್ಳಿಯಪ್ಪ ಶ್ರಮಿಸಿದ್ದಾರೆ.
     ಇವರು 2005 ಅಕ್ಟೋಬರ್ 21ರಂದು ನಿಧನರಾದರು. ಅವರಿಗೆ ಪತ್ನಿ ವಿಮು (ತಾಮನೆ ಅಜ್ಜೀರಂಡ) ಪುತ್ರಿ ಶ್ರುತಿ ಬೊಳ್ಳಮ್ಮ ಇದ್ದಾರೆ. ಇಂಜಿನಿಯರಿಂಗ್ ಪದವೀಧರೆ ಆಗಿರುವ ಬೊಳ್ಳಮ್ಮ ಒರಾಕಲ್ ಕಂಪೆನಿಯಲ್ಲಿ ಉದ್ಯೋಗಿ ಆಗಿದ್ದಾರೆ. ಬೆಳ್ಳಿಯಪ್ಪ ಅವರ ಸಾಧನೆಗಳಿಗೆ, ಸಂಭ್ರಮಗಳಿಗೆ ಬೆಲೆ ದೊರಕಿದಂತಾಗಿದೆ.

news-details