ಮೂಲನಿವಾಸಿಗಳಿಗೆ ಭಾಗಮಂಡಲ ತಲಕಾವೇರಿಯಲ್ಲಿ ಟೋಲ್ ಫ್ರೀ ಮಾಡಲು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯ
ನಮ್ಮ ನೆಲದಲ್ಲಿ ನಾವೇ ಪರಕೀಯರಂತೆ ಬದುಕುವ ಪರಿಸ್ಥಿತಿ ಎದುರಾಗಿರುವುದು ದುರಂತ ಚಮ್ಮಟೀರ ಪ್ರವೀಣ್ ಉತ್ತಪ್ಪ ಕಿಡಿ
ಜಿಲ್ಲೆಯ ಮೂಲನಿವಾಸಿಗಳ ಶೃದ್ಧಾ ಹಾಗೂ ಭಕ್ತಿಯ ಕೇಂದ್ರವಾಗಿರುವ ಭಾಗಮಂಡಲ ತಲಕಾವೇರಿಯಲ್ಲಿ ಕರ ವಸೂಲಿಯ ನೆಪದಲ್ಲಿ ವಾಹನಗಳನ್ನು ತಡೆದು ಟೋಲ್ ಶುಲ್ಕ ಎಂಬಂತೆ ಹಣ ವಸೂಲಿ ಮಾಡುತ್ತಿದ್ದು ಕೂಡಲೇ ಇದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಮೂಲ ನಿವಾಸಿಗಳನ್ನು ಒಂದುಗೂಡಿಸಿ ಹೊರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಚಮ್ಮಟೀರ ಪ್ರವೀಣ್ ಉತ್ತಪ್ಪ, ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಸೇರಿದಂತೆ ಮಾತೆಯನ್ನು ಮನೆ ಮನಗಳಲ್ಲಿ ಆರಾಧಿಸುತ್ತಿರುವ ಜಿಲ್ಲೆಯ ಇತರ ಮೂಲನಿವಾಸಿಗಳಿಗೆ ತಮ್ಮದೇಯಾದ ಆಚಾರ-ವಿಚಾರ, ಧಾರ್ಮಿಕ ಆಚರಣೆಗಳಿದ್ದು, ಇತರ ಜಿಲ್ಲೆಗಳನ್ನು ತೆಗೆದುಕೊಂಡರೆ ಇದು ವಿಭಿನ್ನ ಹಾಗೂ ವಿಶೇಷ ಎನ್ನಬಹುದು. ನಾವು ಭಾಗಮಂಡಲ ತಲಕಾವೇರಿಗೆ ಸೈಡ್ ಸೀನ್ ವಿಕ್ಷಣೆಗಾಗಿ ಅಥವಾ ಮೋಜು ಮಸ್ತಿಗಾಗಿ ಪ್ರವಾಸಕ್ಕೆ ಬರುವವರಲ್ಲ. ಹಿರಿಯರು ನಮಗಾಗಿ ಬಿಟ್ಟು ಹೋಗಿರುವ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಲು, ಹಾಗೂ ಅಗಲಿದ ನಮ್ಮ ಪೂರ್ವಿಕರಿಗೆ ಮೋಕ್ಷವನ್ನು ಬಯಸಿ ನಾವು ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ಮಾಡುತ್ತೇವೆ ಹೊರತು ಅಲ್ಲಿನ ಬ್ರಹ್ಮಗಿರಿ ಬೆಟ್ಟ ಅಥವಾ ಗಜಗಿರಿ ಬೆಟ್ಟಗಳ ವೀವ್ ಪಾಯಿಂಟ್ ತುಂಬಾ ಚೆನ್ನಾಗಿದೆ ಎಂದು ಬರುವುದಲ್ಲ ಎನ್ನುವುದನ್ನು ಸ್ಥಳೀಯ ಪಂಚಾಯತ್ ಅಥವಾ ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕಿದೆ. ಹಾಗೇ ಈ ಭಾಗದಲ್ಲಿ ನೆಲೆಸಿರುವವರು ಮಾತ್ರ ಸ್ಥಳೀಯರು ಎಂಬ ಭಾವನೆಯೂ ಬೇಡ. ಭಾಗಮಂಡಲ ಹಾಗೂ ತಲಕಾವೇರಿ ಇದು ಎರಡು ಪುಣ್ಯಕ್ಷೇತ್ರ ಮೂಲನಿವಾಸಿಗಳಿಗೆ ಅದರಲ್ಲೂ ಕೊಡವ ಜನಾಂಗಕ್ಕೆ ಪವಿತ್ರ ಪುಣ್ಯಕ್ಷೇತ್ರ ಮಾತ್ರವಲ್ಲ ಇದು ಹೆಣ್ಣು ಮಕ್ಕಳಿಗೆ ತವರು ಮನೆಯಂತೆ ನಮಗೆ ಹೆತ್ತಮ್ಮನ ಮನೆ ಮನೆ ಎಂದರೆ ತಪ್ಪಲ್ಲ.
ಕಾವೇರಿ ಮಾತೆಯನ್ನು ತಮ್ಮ ಕುಲದೇವಿಯಾಗಿ ಪೂಜಿಸುತ್ತಿರುವ ಕೊಡವರು ಹುಟ್ಟಿನಿಂದ ಸಾವಿನವರೆಗೂ ಆ ತಾಯಿಯನ್ನು ಬದುಕಿನಲ್ಲಿ ಆರಾಧಿಸಿಕೊಂಡು, ವಿವಿಧ ಕಟ್ಟುಪಾಡುಗಳನ್ನು ಪಾಲಿಸಿಕೊಂಡು ವರ್ಷಕೊಮ್ಮೆಯಾದರು ಭಾಗಮಂಡಲ ತಲಕಾವೇರಿಗೆ ಬೇಟಿನೀಡಿ ತಮ್ಮ ಬೇಕು ಬೇಡಿಕೆಗಳನ್ನು ಆ ತಾಯಿ ಕಾವೇರಿಗೆ ಅರ್ಪಿಸುತ್ತಾರೆ. ಹುಟ್ಟಿದ ಮಗುವಿನ ತಲೆ ಮುಡಿ ಹರಕೆಯಿಂದ ಹಿಡಿದು ಸತ್ತವರ ಹೆಸರಿನಲ್ಲಿ ಕಿರಿಯರು ತಲೆ ಮುಡಿ ಹರಕೆ ಕೊಟ್ಟು ಪಿಂಡ ಪ್ರಧಾನ ಮಾಡಿ ಅಗಲಿದ ಆತ್ಮಗಳಿಗೆ ಮೋಕ್ಷವನ್ನು ಕೋರುತ್ತಾರೆ. ಹೀಗಿರುವಾಗ ತಮ್ಮದೆಯಾದ ನೆಲದಲ್ಲಿ ತನ್ನ ಹೆತ್ತ ತಾಯಿಯನ್ನು ನೋಡಲು ಹಣಕೊಟ್ಟು ಹೋಗುವ ದೌರ್ಭಾಗ್ಯ ಬಂದಿರುವುದು ದುರಾದೃಷ್ಟಕರ. ಕೂಡಲೆ ಸ್ಥಳೀಯರಿಗೆ ವಾಹನ ಶುಲ್ಕವಾಗಲಿ ಇನ್ನಿತರ ಶುಲ್ಕವಾಗಲಿ ವಿಧಿಸಕೂಡದ್ದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಹಾಗೇ ಕಾವೇರಿ ಮಾತೆಯ ದರ್ಶನಕ್ಕೆ ಸ್ಥಳೀಯರಿಗೆ ಮುಕ್ತ ವಾತಾವರಣ ಕಲ್ಪಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈ ನಿಟ್ಟಿನಲ್ಲಿ ಕಾವೇರಿ ಮಾತೆಯ ಮೇಲೆ ಅತಿಯಾದ ಭಕ್ತಿ ಹಾಗೂ ನಂಬಿಕೆ ಇರುವ ಮತ್ತು ಕಾವೇರಿ ಮಾತೆಯನ್ನು ತಮ್ಮ ಕುಲದೇವರಾಗಿ ಪೂಜಿಸುತ್ತಿರುವ ಮಾನ್ಯ ಶಾಸಕರ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆದ ಎ.ಎಸ್ ಪೊನ್ನಣ್ಣನವರು ಇತ್ತಾ ಗಮನ ಹರಿಸಬೇಕಿದೆ. ಪ್ರವಾಸಿಗರಿಂದ ಟೋಲ್ ಶುಲ್ಕ ಅಥವಾ ವಾಹನ ಶುಲ್ಕ ಅಥವಾ ಬೇರೆ ಯಾವ ಶುಲ್ಕ ಬೇಕಾದರೆ ವಸೂಲಿ ಮಾಡಲಿ ಅದಕ್ಕೆ ನಮ್ಮದು ಅಭ್ಯಾಂತರವಿಲ್ಲ. ಆದರೆ ನಿಜವಾದ ಕಾವೇರಿ ಭಕ್ತರಿಗೆ ಅದರಲ್ಲೂ ಮೂಲನಿವಾಸಿಗಳಿಗೆ ಯಾವುದೇ ಶುಲ್ಕವನ್ನು ವಸೂಲಿ ಮಾಡಕೂಡದ್ದು ಎಂಬ ಆದೇಶವನ್ನು ಹೊರಡಿಸಬೇಕಿದೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಟೋಲ್'ಗಳಲ್ಲಿಯೇ ಸ್ಥಳೀಯರಿಂದ ಸುಂಕ ವಸೂಲಿ ಮಾಡುವುದಿಲ್ಲ ಹೀಗಿರುವಾಗ ನಮ್ಮದೆ ನೆಲದಲ್ಲಿ ನಾವು ಅನ್ಯರಂತೆ ಬದುಕು ಸಾಗಿಸುವುದು ಸರಿಯಲ್ಲ. ಕೂಡಲೇ ಮಾನ್ಯ ಶಾಸಕರು ಇತ್ತಾ ಗಮನ ಹರಿಸಬೇಕಿದೆ. ಇದರ ಜೊತೆಗೆ ಪಿಂಡ ಪ್ರದಾನ ಮಾಡುವ ಭಕ್ತರ, ಮೂಲ ನಿವಾಸಿಗಳ ವಾಹನಗಳನ್ನು ತಲಕಾವೇರಿ ಮುಖ್ಯ ದ್ವಾರದ ಕೆಳಗೆ ನಿಲ್ಲಿಸದೆ ಕಾವೇರಿ ಕುಂಡಿಕೆಯ ಬಳಿ ಇರುವ ವಾಹನ ನಿಲುಗಡೆ ಸ್ಥಳಕ್ಕೆ ಬಿಡುವಂತಾಗಬೇಕು. ಪ್ರವಾಸಿಗರ ವಾಹನಗಳಿಗೆ ಕೆಳಗೆ ನಿಲ್ಲಲ್ಲು ಅವಕಾಶ ಮಾಡಿಕೊಟ್ಟು ಪಿಂಡ ಪ್ರದಾನ ಮಾಡಿದ ಸ್ಥಳೀಯರ ವಾಹನಗಳನ್ನು ಗೇಟಿನ ಒಳಗೆ ಬಿಡುವಂತಾಗಬೇಕು. ಏಕೇಂದರೆ ಪಿಂಡ ಪ್ರಧಾನಕ್ಕೆ ಬರುವ ಸ್ಥಳೀಯ ಮೂಲ ನಿವಾಸಿಗಳು ಬೆಳಿಗ್ಗೆಯಿಂದ ಉಪವಾಸವಿದ್ದು ವ್ರತದಲ್ಲಿ ಬರುತ್ತಾರೆ ಹಾಗೂ ಸ್ನಾನ ಮಾಡಿ ಬಟ್ಟೆಗಳನ್ನು ಬದಲಾಯಿಸಿಕೊಳ್ಳುವುದು ಮಾತ್ರವಲ್ಲ. ಒಂದಷ್ಟು ಆಚರಣೆಗೆ ಬೇಕಾದ ವಿವಿಧ ಪದಾರ್ಥಗಳನ್ನು ತಂದಿರುತ್ತಾರೆ, ಜೊತೆಯಲ್ಲಿ ವಯಸ್ಸಾದವರು ಮಕ್ಕಳು ಕೂಡ ಇರುತ್ತಾರೆ, ಹೀಗಿರುವಾಗ ಗೇಟಿನ ಹೊರಗಡೆ ನಿಲ್ಲಿಸಿ ಇವರನ್ನು ಪರಕೀಯರಂತೆ ಕಾಣುವುದು ಸರಿಯಲ್ಲ. ಕೂಡಲೇ ಈ ಸಮಸ್ಯೆಗಳನ್ನು ಬಗೆ ಹರಿಸಲು ಗಮನ ಹರಿಸಬೇಕು ಹಾಗೂ ತಲಕಾವೇರಿ ಭಾಗಮಂಡಲದಲ್ಲಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೆಲವೊಮ್ಮೆ ವಸ್ತ್ರ ಸಂಹಿತೆ ನೆಪದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರ ನಡುವೆ ವಾಗ್ವಾದ ನಡೆದಿದ್ದು ಇದೆ. ಹಾಗೇ ದೇವರ ದರ್ಶನ ಹಾಗೂ ಪೂಜೆ ಪುನಸ್ಕಾರಗಳಲ್ಲಿ ಕೂಡ ಪಿಂಡ ಪ್ರಧಾನ ಮಾಡಿದವರಿಗೆ ಮೊದಲ ಆದ್ಯತೆ ನೀಡುವಂತಾಗಬೇಕು ಎಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಒತ್ತಾಯಿಸಿದ್ದಾರೆ.