ಸೋಮವಾರಪೇಟೆ: ಸೋಮವಾರಪೇಟೆ ನಗರ ಪ್ರವೇಶಧ್ವಾರದಲ್ಲಿ ಕಕ್ಕೆಹೊಳೆಗೆ ಸುಮಾರು 1.65 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸೇತುವೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್‌ಗೌಡ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ನಂತರ ಐದು ಗ್ಯಾರೆಂಟಿಗಳೊAದಿಗೆ, ಅಭಿವೃದ್ಧಿ ಕಾಮಗಾರಿಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಅಭಿಪ್ರಾಯಿಸಿದರು. ಅತೀ ಹೆಚ್ಚು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಶಿಥಿಲಗೊಂಡಿದ್ದ ಕಕ್ಕೆಹೊಳೆ ಸೇತುವೆಯಲ್ಲಿ ತೆರಳುತ್ತಿದ್ದರು. ನೂತನ ಸೇತುವೆ ನಿರ್ಮಾಣಕ್ಕೆ ಅನುದಾನ ಕೋರಿದ ಸಂದರ್ಭ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಅನುದಾನ ಕಲ್ಪಿಸಿದರು. ಅನುದಾನ ನೀಡಿದ 8 ತಿಂಗಳಲ್ಲೇ ಸೇತುವೆ ಕಾಮಗಾರಿ ಮುಗಿದಿದೆ. ವಿದ್ಯಾರ್ಥಿಗಳಿಗೆ ನಡೆದಾಡಲು ಫುಟ್‌ಪಾತ್ ನಿರ್ಮಿಸಲಾಗಿದೆ. ಇನ್ನು ಮುಂದೆ ನೆಮ್ಮದಿಯಿಂದ ಸಂಚರಿಸಬಹುದು ಎಂದು ಹೇಳಿದರು. ನನ್ನ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಐಗೂರು ಸೇತುವೆ ನಿರ್ಮಾಣಕ್ಕೂ ಅನುದಾನ ಸಿಕ್ಕಿದೆ. ಕಲ್ಲಂದೂರು, ಕೂತಿ ರಸ್ತೆ 20 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಡಾಮರೀಕರಣಗೊಳ್ಳಲಿದೆ ಎಂದರು.
ಕಕ್ಕೆಹೊಳೆ ಸೇತುವೆ ಸನಿಹದಲ್ಲೇ ಬಸವೇಶ್ವರರ ಪ್ರತಿಮೆಯಿದ್ದು, ನೂತನ ಸೇತುವೆಗೂ ಬಸವೇಶ್ವರರ ಹೆಸರು ಇಡಬೇಕು ಎಂದು ಕಿರಿಕೊಡ್ಲಿಮಠದ ಸದಾಶಿವ ಸ್ವಾಮೀಜಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗುತ್ತಿಗೆದಾರ ಆರ್.ಸಿ.ಗಣೇಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮನೆಹಳ್ಳಿ ಮಠದ ಮಹಾಂತ ಶಿವಲಿಂಗಸ್ವಾಮೀಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷ ಬಿ.ಬಿ.ಸತೀಶ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ.ಲೋಕೇಶ್, ಪ್ರಮುಖರಾದ ಎಚ್.ಆರ್.ಸುರೇಶ್, ಈಶ್ವರಚಂದ್ರ ವಿದ್ಯಾಸಾಗರ್, ಕಾಂತರಾಜ್, ಕೆ.ಎ.ಆದಂ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಇದ್ದರು.