Breaking News
   
   
   

ವಿರಾಜಪೇಟೆ ಕ್ಷೇತ್ರವನ್ನು ರಾಜ್ಯ ಮತ್ತು ರಾಷ್ಟ್ರದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ತೊಟ್ಟಿದ್ದೇನೆ: ಎ.ಎಸ್.ಪೊನ್ನಣ್ಣ

ಕೊಡಗು

news-details

ನಾಪೋಕ್ಲು : ಅಭಿವೃದ್ದಿಯಲ್ಲಿ ತೀರಾ ಹಿಂದುಳಿದಿರುವ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರವನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಪಡಿಸಿ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸಲು ಸಂಕಲ್ಪ ತೊಟ್ಟಿದ್ದೇನೆ ಜನರು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ. ಕ್ಷೇತ್ರದ ನಾಪೋಕ್ಲು ಬ್ಲಾಕ್ ವ್ಯಾಪ್ತಿಯ ಪಾರಾಣೆ, ಬೆಟ್ಟಗೇರಿ, ಬೇಂಗೂರು, ಚೇರಂಬಾಣೆ, ಚೆಟ್ಟಿಮಾನಿ, ಕುಂದಚೇರಿ, ಭಾಗಮಂಡಲ, ಅಯ್ಯಂಗೇರಿ, ಎಮ್ಮೆಮಾಡು ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 9 ಕೋಟಿ 26 ಲಕ್ಷ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ದೊಡ್ಡ ದೊಡ್ಡ ಫ್ಲೈ ಓವರ್ ಅಥವಾ ದೊಡ್ಡ ಸೇತುವೆ ನಿರ್ಮಿಸಿದರೆ ಅದು ಮಾತ್ರ ಅಭಿವೃದ್ದಿ ಎಂದೆನಿಸುವುದಿಲ್ಲ.ಗ್ರಾಮೀಣ ಭಾಗದ ಜನರ ಮೂಲಭೂತ ಸೌಕರ್ಯಗಳನ್ನು ಸರಿಪಡಿಸಿದರೆ ಅದು ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.  
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ ಎ.ಎಸ್.ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಕೊಡಗಿನ ಶಾಸಕರಾಗಿ ಆಯ್ಕೆ ಆದ ನಂತರ  ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭಗೊಂಡಿದೆ. ಜನ ಬೆಂಬಲ ಇದ್ದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. 
ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ ಇಷ್ಟು ದೊಡ್ಡ ಮೊತ್ತದ ಅನುದಾನದ ನಿರೀಕ್ಷೆ ಇರಲಿಲ್ಲ. ಆದರೆ ಎ.ಎಸ್.ಪೊನ್ನಣ್ಣ ನವರ ಸಾಮರ್ಥ್ಯ ದಿಂದ ಹೆಚ್ಚಿನ ಅನುದಾನ ಬಂದಿದೆ. ಎಲ್ಲಾ ಗ್ರಾಮಗಳಿಗೂ ಆದ್ಯತೆ ಅನುಸಾರ ಹಂಚಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು. ಮಡಿಕೇರಿ ತಾಲ್ಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ವಲಯ ಕಾಂಗ್ರೆಸ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಅಧ್ಯಕ್ಷರು , ಸದಸ್ಯರು, ಡಿಸಿಸಿ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು,  ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

news-details